×
Ad

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಯ ನೆರವಿಗಾಗಿ ಅಭಿಯಾನ

Update: 2018-10-23 23:13 IST

ಉಡುಪಿ, ಅ.23: ಶ್ರೀಕೃಷ್ಣಾಷ್ಟಮಿ ಸಂದರ್ಭ ವೇಷ ಧರಿಸುವ ಸಮಾಜ ಸೇವಕ ರವಿ ಕಟಪಾಡಿಯ ವಿಡಿಯೋ ಮೂಲಕ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸುವ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಮಹೇಶ್ ಶೆಣೈ, ಮಿಲಾಪ್ ಸಂಸ್ಥೆಯು ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಈ ವಿಡಿಯೋವನ್ನು ಈಗಾಗಲೇ 1ಕೋಟಿ 7ಲಕ್ಷ ಮಂದಿ ವೀಕ್ಷಿಸಿದ್ದು, ಈವರೆಗೆ ಒಟ್ಟು 13.85ಲಕ್ಷ ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.

ಈ ಅಭಿಯಾನಕ್ಕೆ ದೇಶವಿದೇಶದಲ್ಲಿರುವ ಅದರಲ್ಲಿಯೂ ಮುಖ್ಯವಾಗಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರು ಬಹಳಷ್ಟು ನೆರವು ನೀಡಿದ್ದಾರೆ. ಜನರ ಕೋರಿಕೆಯ ಮೇರೆಗೆ ಈ ಅಭಿಯಾನವನ್ನು ಇನ್ನೂ ಒಂದು ತಿಂಗಳ ಕಾಲ ಮುಂದುವರೆಸಲಾಗುತ್ತದೆ. ಇದರಲ್ಲಿ ಸಂಗ್ರಹವಾದ ಹಣವನ್ನು ಬಡ ಮಕ್ಕಳ ಚಿಕಿತ್ಸೆಗೆ ವರ್ಗಾಯಿಸಲಾಗುವುದು ಎಂದರು.

ರವಿ ಕಟಪಾಡಿ ಕಳೆದ ಐದು ವರ್ಷಗಳಿಂದ ಉಡುಪಿ ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ವೇಷ ಧರಿಸಿ ಒಟ್ಟು 20 ಅನಾರೋಗ್ಯ ಪೀಡಿತ ಮಕ್ಕಳಿಗೆ 19,33,810ರೂ. ಹಣ ಸಂಗ್ರಹಿಸಿ ನೀಡಿದ್ದಾರೆ. ಪ್ರಥಮ ವರ್ಷ ಒಂದು ಮಗುವಿಗೆ 1,04,810ರೂ., ಎರಡನೆ ವರ್ಷ ನಾಲ್ಕು ಮಕ್ಕಳಿಗೆ 3,65,000 ರೂ., ಮೂರನೆ ವರ್ಷ ನಾಲ್ಕು ಮಕ್ಕಳಿಗೆ 4.20ಲಕ್ಷ ರೂ., ನಾಲ್ಕನೆ ವರ್ಷ 7 ಮಕ್ಕಳಿಗೆ 5.12ಲಕ್ಷ ರೂ., ಐದನೆ ವರ್ಷ 5 ಮಕ್ಕಳಿಗೆ 5.32ಲಕ್ಷ ರೂ. ನೀಡಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರವಿ ಕಟಪಾಡಿ, ರಕ್ಷಿತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News