ನಕಲಿ ಸೌಂದರ್ಯ ವರ್ಧಕ ಮಾರಾಟ: ಅಮೆಝಾನ್, ಇತರ ಇ-ಕಾಮರ್ಸ್ ತಾಣಗಳಿಗೆ ನೋಟಿಸ್

Update: 2018-10-23 17:57 GMT

ಹೊಸದಿಲ್ಲಿ,ಅ.23: ವಿದೇಶಿ ಬ್ರಾಂಡ್‌ಗಳು ಸೇರಿದಂತೆ ನಕಲಿ, ಕಲಬೆರಕೆ ಮತ್ತು ಅನುಮತಿಪಡೆಯದ ಸೌಂದರ್ಯ ವರ್ಧಕಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಅಮೆಝಾನ್ ಸೇರಿದಂತೆ ಇತರ ಕೆಲವು ಇ-ಕಾಮರ್ಸ್ ಸಂಸ್ಥೆಗಳಿಗೆ ದೇಶದ ಔಷಧಿ ನಿಯಂತ್ರಕ ಸಂಸ್ಥೆ ಡಿಸಿಜಿಐ ನೋಟಿಸ್ ಜಾರಿ ಮಾಡಿದೆ.

ಅಕ್ಟೋಬರ್ 5-6ರಂದು ಔಷಧಿ ನಿರೀಕ್ಷಕರು ದೇಶದ ವಿವಿಧೆಡೆಗಳಲ್ಲಿ ನಡೆಸಿದ ದಾಳಿಯ ವೇಳೆ ಉತ್ಪಾದನಾ ಪರವಾನಿಗೆಯಿಲ್ಲದೆ ತಯಾರಿಸಿದ ಮತ್ತು ಯಾವುದೇ ಅಗತ್ಯ ನೋಂದಣಿ ಪ್ರಮಾಣಪತ್ರವಿಲ್ಲದೆ ಆಮದು ಮಾಡಿದ ಕಚ್ಚಾವಸ್ತುಗಳಿಂದ ತಯಾರಿಸಿ ಸೌಂದರ್ಯ ವರ್ಧಕಗಳ ಬೃಹತ್ ಸಂಗ್ರಹ ಪತ್ತೆಯಾಗಿತ್ತು. ಈ ನಕಲಿ, ಕಲಬೆರಕೆ ಸೌಂದರ್ಯ ವರ್ಧಕಗಳು ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಆನ್‌ಲೈನ್‌ನಲ್ಲಿ ಮಾರಾಟ ಮಾಡಲ್ಪಡುತ್ತಿದ್ದವು.

ಇಂಥ ನಿರ್ಲಕ್ಷಗಳಿಗೆ ನಗದು ದಂಡದಿಂದ ಕಾರಾಗೃಹ ಶಿಕ್ಷೆಯವರೆಗೂ ವಿಧಿಸಬಹುದಾದ ಅಧಿಕಾರವನ್ನು ಕಾನೂನು ನೀಡುತ್ತದೆ. ಈ ಕುರಿತು ಅಮೆಝಾನ್ ಇಂಡಿಯ ವಕ್ತಾರರ ಬಳಿ ಪ್ರಶ್ನಿಸಿದಾಗ, ಕಂಪೆನಿಯು ನಕಲಿ ಮತ್ತು ಕಲಬೆರಕೆ ವಸ್ತುಗಳ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಅಮೆಝಾನ್ ಒಂದು ಥರ್ಡ್ ಪಾರ್ಟಿ ಮಾರುಕಟ್ಟೆಯಾಗಿದ್ದು ಮಾರಾಟಗಾರರು ಭಾರತೀಯ ಗ್ರಾಹಕರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ವೇದಿಕೆಯನ್ನು ಕಲ್ಪಿಸುತ್ತದೆ. ಅಮೆಝಾನ್.ಕಾಮ್‌ನಲ್ಲಿ ಮಾರಾಟಗಾರರೇ ತಮ್ಮ ಉತ್ಪಾದನೆಗಳ ಮಾಲಕತ್ವವನ್ನು ಹೊಂದಿದ್ದು ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News