ಕರ್ತವ್ಯ ನಿಭಾಯಿಸಲಾಗದ ನೋವು!: ರಾಜೀನಾಮೆ ಸಲ್ಲಿಸಿದ ಶಾಸಕ

Update: 2018-10-23 18:10 GMT

ಗುವಾಹಟಿ,ಅ.23: “ಓರ್ವ ಶಾಸಕನಾಗಿ ನಾನು ನನ್ನ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲವಾದ ಕಾರಣ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಈಗಾಗಲೇ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ಗೆ ಕಳುಹಿಸಿದ್ದೇನೆ” ಎಂದು ಬಿಜೆಪಿ ಶಾಸಕ ತೆರಶ್ ಗೊವಲ್ಲ ತಿಳಿಸಿದ್ದಾರೆ.

“ಇಲ್ಲಿ ಬಹಳಷ್ಟು ಸಮಸ್ಯೆಗಳಿವೆ.ಶಾಸಕನಾಗಿ ನಾನು ನನ್ನ ಕರ್ತವ್ಯವನ್ನು ನಿಭಾಯಿಸಲು ಸಾಧ್ಯವಾಗಿಲ್ಲ. ಹಾಗಾಗಿ ನೈತಿಕ ಹೊಣೆಯನ್ನು ರಾಜ್ಯ ವಿಧಾನಸಭೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ” ದುಲಿಯಜನ್ ಕ್ಷೇತ್ರದ ಶಾಸಕರಾದ ಗೊವಲ್ಲ ತಿಳಿಸಿದ್ದಾರೆ. ಸರಕಾರದಲ್ಲಿ , ಮುಖ್ಯವಾಗಿ ಅಸ್ಸಾಂ ಗ್ಯಾಸ್ ಕಂಪೆನಿ ಲಿ.ನಲ್ಲಿ ಯಾವುದೇ ಹುದ್ದೆಯನ್ನು ನೀಡದಿರುವುದು ಈ ನಿರ್ಧಾರಕ್ಕೆ ಕಾರಣವೇ ಎಂದು ಪ್ರಶ್ನಿಸಿದಾಗ, “ಅದೂ ಒಂದು ಕಾರಣ. ಎಜಿಸಿಎಲ್ ದುಲಿಯಜನ್‌ನಲ್ಲಿದೆ ಮತ್ತು ಅಲ್ಲಿನ ಜನರು ನನ್ನನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ನನ್ನಿಂದ ಕೆಲವೊಂದು ನಿರೀಕ್ಷೆಗಳಿವೆ” ಎಂದು ಗೊವಲ್ಲ ತಿಳಿಸಿದ್ದಾರೆ. “ನನ್ನ ಜೊತೆ ಸಮಾಲೋಚನೆ ನಡೆಸದೆಯೇ ಕಂಪೆನಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಯಿತು. ನನ್ನನ್ನು ಆಯ್ಕೆ ಮಾಡಿ ಎಂದು ನಾನು ಹೇಳುತ್ತಿಲ್ಲ. ಆದರೆ ಕನಿಷ್ಟ ಪಕ್ಷ ಅವರು ನನ್ನ ಜೊತೆ ಚರ್ಚೆ ನಡೆಸಬೇಕಿತ್ತು” ಎಂದು ಗೊವಲ್ಲ ಅಭಿಪ್ರಾಯಿಸಿದ್ದಾರೆ. ಸರಕಾರದಿಂದ ತೃಪ್ತಿದಾಯಕ ಉತ್ತರ ಲಭಿಸಿದರೆ ತಾನು ತನ್ನ ರಾಜೀನಾಮೆಯನ್ನು ವಾಪಸ್ ಪಡೆಯಲು ಚಿಂತಿಸುವುದಾಗಿಯೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News