ಮಹಾನ್ ವ್ಯಕ್ತಿಗಳನ್ನು ಕೇವಲ ಒಂದು ಜಾತಿ, ವರ್ಗಕ್ಕೆ ಸೀಮಿತಗೊಳಿಸದಿರಿ: ಶಾಸಕ ರಾಜೇಶ್ ನಾಯ್ಕ್

Update: 2018-10-24 12:13 GMT

ಬಂಟ್ವಾಳ, ಅ. 24: ನಮ್ಮ ಸ್ವಾರ್ಥಕ್ಕಾಗಿ ದೇಶದ ಮಹಾನ್ ವ್ಯಕ್ತಿಗಳನ್ನು ಕೇವಲ ಒಂದು ಜಾತಿ, ವರ್ಗಕ್ಕೆ ಸೀಮಿತಗೊಳಿಸುವಂತಹ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಶ್ರೇಷ್ಠ ವ್ಯಕ್ತಿಗಳ ಜೀವನ ಸಾಧನೆಯನ್ನು ತಮ್ಮ  ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಕಡಿಮೆಯಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಭಿಪ್ರಾಯಪಟ್ಟರು.

ತಾಲೂಕಾಡಳಿತ ಬಂಟ್ವಾಳ, ತಾಪಂ ಬಂಟ್ವಾಳ, ಪುರಸಭೆ ಹಾಗೂ ಸಮಾಜಕಲ್ಯಾಣ ಇಲಾಖೆ ಬಂಟ್ವಾಳ ಇದರ ಸಂಯುಕ್ತಾಶ್ರಯದಲ್ಲಿ ಬಿ.ಸಿ.ರೋಡಿನ ಎಸ್‍ಜೆಎಸ್‍ಆರ್‍ವೈ ಸಭಾಂಗಣದಲ್ಲಿ ಬುಧವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸಾಹಿತಿ ಭಾಸ್ಕರ ಅಡ್ವಾಳ ವಾಲ್ಮೀಕಿ ಜಯಂತಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಕತ್ತಿ ಹಿಡಿಯುತ್ತಿದ್ದ ಕೈಯಲ್ಲಿ ಲೇಖನಿ ಹಿಡಿದು ಇಡೀ ಸಮಾಜದಲ್ಲಿ ಪರಿವರ್ತನೆ ಮಾಡಿದ ವ್ಯಕ್ತಿ ವಾಲ್ಮೀಕಿ ಅವರು. ವಾಲ್ಮೀಕಿಯಂತೆ ಕರ್ತವ್ಯ ನಿಷ್ಠೆ, ಸ್ವಾಮಿ ಭಕ್ತಿ, ಸಮಯಪ್ರಜ್ಞೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಹಾಜರಿದ್ದರು.
ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್ ಸ್ವಾಗತಿಸಿದರು. ತಹಶೀಲ್ದಾರ್ ಪುರಂದರಹೆಗ್ಡೆ ಪ್ರಸ್ತಾವಿಸಿದರು, ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು, ಪ್ರಸಾದ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News