ನವೆಂಬರ್‌ನೊಳಗೆ ಟಿಕೆಟ್ ಘೋಷಿಸದಿದ್ದರೆ ತೀವ್ರ ಹೋರಾಟ: ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್

Update: 2018-10-24 15:08 GMT

ಮಂಗಳೂರು, ಅ. 24: ದ.ಕ.ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಮುಖ ರಾಜಕೀಯ ಪಕ್ಷವು ಮುಸ್ಲಿಂ ಅಭ್ಯರ್ಥಿಗೆ ನವೆಂಬರ್‌ನೊಳಗೆ ಟಿಕೆಟ್ ಘೋಷಿಸದಿದ್ದರೆ ಡಿಸೆಂಬರ್ 15ರೊಳಗೆ ಮಂಗಳೂರಿನಲ್ಲಿ ಬೃಹತ್ ಜನಜಾಗೃತಿ ಸಭೆಯ ಮೂಲಕ ಹೋರಾಟ ತೀವ್ರಗೊಳಿಸಲಾಗುವುದು ಎಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಎಚ್ಚರಿಸಿದ್ದಾರೆ.

ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧೀನದಲ್ಲಿ ರಚನೆಗೊಂಡ ದ.ಕ.ಲೋಕಸಭಾ ಕ್ಷೇತ್ರ ಕ್ರಿಯಾ ಸಮಿತಿಯ ವತಿಯಿಂದ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ಗಾಗಿ ನಗರದ ಮಿನಿ ಪುರಭವನದಲ್ಲಿ ಬುಧವಾರ ಜರುಗಿದ ಹಕ್ಕೊತ್ತಾಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ ಲಭಿಸಿ 70 ವರ್ಷವಾದರೂ ಕೂಡಾ ಮಂಗಳೂರು ಅಥವಾ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಸ್ಲಿಂ ಅಭ್ಯರ್ಥಿಗೆ ಪ್ರಮುಖ ರಾಜಕೀಯ ಪಕ್ಷವು ಟಿಕೆಟ್ ನೀಡಿಲ್ಲ. ಮುಸ್ಲಿಂ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಸದ್ಯ ಚರ್ಚೆ ಬೇಡ. ನವೆಂಬರ್‌ನೊಳಗೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಘೋಷಿಸಬೇಕು. ಇದೇನು ನಮ್ಮ ಭಿಕ್ಷೆ ಅಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಸದ್ಯ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಆಡಳಿತ ನಡೆಸುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷದ ಮುಖಂಡರು ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಮುಸ್ಲಿಂ ಸಮುದಾಯವು ಒಗ್ಗಟ್ಟನ್ನು ಪ್ರದರ್ಶಿಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಪಣ ತೊಡಬೇಕಾಗಿದೆ ಎಂದು ಮುಹಮ್ಮದ್ ಮಸೂದ್ ಹೇಳಿದರು.

ವೇದಿಕೆಯಲ್ಲಿ ವಿವಿಧ ರಾಜಕೀಯ ಪಕ್ಷ ಹಾಗೂ ಪ್ರಮುಖ ಸಂಘಟನೆಗಳ ಮುಖಂಡರಾದ ಹೈದರ್ ಪರ್ತಿಪ್ಪಾಡಿ, ಅಬ್ದುರ್ರವೂಫ್ ಪುತ್ತಿಗೆ, ಹಾಜಿ ಎಸ್.ಎಂ.ರಶೀದ್, ಹಾಜಿ ಪಿ.ಬಿ. ಅಬ್ದುಲ್ ಹಮೀದ್, ಅಥಾವುಲ್ಲಾ ಜೋಕಟ್ಟೆ, ಬಿ.ಎಚ್.ಖಾದರ್, ಹನೀಫ್ ಖಾನ್ ಕೊಡಾಜೆ, ಮುಹಮ್ಮದ್ ಗುಲಾಂ, ಸಿ.ಮಹ್ಮೂದ್ ಹಾಜಿ, ಸಿದ್ದೀಕ್ ತಲಪಾಡಿ, ಕುಂಞಿಮೋನು ಉಳ್ಳಾಲ, ಕೆ.ಪಿ.ಅಹ್ಮದ್ ಹಾಜಿ ಪುತ್ತೂರು, ಟಿ.ಎಂ.ಶಹೀದ್, ಹಕ್ ಅಸಾದಿ, ಮುಹಮ್ಮದ್ ಹನೀಫ್ ಗೋಳ್ತಮಜಲು, ಇಮ್ತಿಯಾಝ್, ಮುಸ್ತಫಾ ಕೆಂಪಿ, ತಬೂಕ್ ದಾರಿಮಿ, ಸಈದ್ ಇಸ್ಮಾಯೀಲ್, ಅಝೀಝ್ ಕುದ್ರೋಳಿ, ಮುಹಮ್ಮದ್ ಎಸ್‌ಕೆಎಂ ಮತ್ತಿತರರು ಉಪಸ್ಥಿತರಿದ್ದರು.

ಹಾಜಿ ಇಬ್ರಾಹೀಂ ಕೋಡಿಜಾಲ್ ಸ್ವಾಗತಿಸಿದರು. ಮುಹಮ್ಮದ್ ಸಜೀಂ ಕಿರಾಅತ್ ಪಠಿಸಿದರು. ಹನೀಫ್ ಹಾಜಿ ವಂದಿಸಿದರು. ನೂರುದ್ದೀನ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

ಒಕ್ಕಲಿಗರು, ಲಿಂಗಾಯಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ವಿವಿಧ ಕ್ಷೇತ್ರಗಳನ್ನು ಮೀಸಲಿಡುವಾಗ ರಾಜ್ಯದಲ್ಲಿ ಶೇ.16ರಷ್ಟು ಮುಸ್ಲಿಮರಿರುವ ವಿಧಾನಸಭೆ-ಲೋಕಸಭಾ ಕ್ಷೇತ್ರದಲ್ಲೂ ಕೂಡಾ ಮೀಸಲು ನೀಡುವ ಪರಿಪಾಠ ಬೆಳೆಯಬೇಕು. ಅದಕ್ಕಾಗಿ ಹೋರಾಟ, ಜನಜಾಗೃತಿ ರೂಪಿಸಬೇಕಿದೆ. ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧೀನದಲ್ಲಿರುವ ಕ್ರಿಯಾ ಸಮಿತಿಯ ಈ ಪ್ರಯತ್ನ ಮುಂದುವರಿಸಬೇಕು. ಜಿಲ್ಲೆಯ ಮುಸಲ್ಮಾನರ ಪೈಕಿ ಶೇ.95ರಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಹಾಗಾಗಿ ಇದು ಸಮುದಾಯದ ಹಕ್ಕಾಗಬೇಕಿದೆ. ಮುಂದಿನ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಲಭಿಸಲೇಬೇಕು.

-ಬಿ.ಎ.ಮೊಯ್ದಿನ್ ಬಾವಾ, ಮಾಜಿ ಶಾಸಕರು

ನ್ಯಾಯಬದ್ಧ ಹಕ್ಕನ್ನು ಪಡೆಯಲು ಮುಸ್ಲಿಮರು ಇನ್ನಾದರೂ ಒಗ್ಗಟ್ಟು ಪ್ರದರ್ಶಿಸಬೇಕು. ಶಕ್ತಿ ಪ್ರದರ್ಶಿಸಿ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು.

- ಬಿ. ಇಬ್ರಾಹೀಂ, ಮಾಜಿ ರಾಜ್ಯಸಭಾ ಸದಸ್ಯ

ಹಿಂದೆ ಕಾಂಗ್ರೆಸ್‌ನಲ್ಲಿ ಮುಸ್ಲಿಮರಿಗೆ ಉತ್ತಮ ಸ್ಥಾನಮಾನ ಸಿಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಆ ಸ್ಥಾನಮಾನಕ್ಕಾಗಿ ಹೋರಾಟ ಮಾಡಿ ಪಡೆಯುವಂತಹ ಸ್ಥಿತಿ ಇದೆ. ಹಾಗಾಗಬಾರದು. ಮುಸ್ಲಿಮರನ್ನು ಕಾಂಗ್ರೆಸ್ ಸಹಿತ ಪ್ರಮುಖ ರಾಜಕೀಯ ಪಕ್ಷಗಳು ಗಣನೆಗೆ ತೆಗೆದುಕೊಳ್ಳುವಂತಹ ವಾತಾವರಣ ರೂಪಿಸಬೇಕಿದೆ. ಮುಸ್ಲಿಮರ ಶಕ್ತಿ ಏನು ಎಂಬುದನ್ನು ತೋರಿಸಿಕೊಡಬೇಕಿದೆ.

- ಕೆ.ಅಶ್ರಫ್, ಮಾಜಿ ಮೇಯರ್

2007ರಲ್ಲಿ ನಾನು ಪೊಲೀಸ್ ಇಲಾಖೆಯಿಂದ ನಿವೃತ್ತನಾದೊಡನೆ ಕೆಲವು ಮುಸ್ಲಿಂ ನಾಯಕರೊಂದಿಗೆ ಚರ್ಚೆ ನಡೆಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯಾಗಿ ಹಿರಿಯ ನೇತಾರ ಬಿ.ಎ.ಮೊಹಿದೀನ್ ಅವರನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸಿದ್ದೆ. ಆವಾಗ ನನಗೆ ಬೆಂಬಲ ಸಿಕ್ಕಿರಲಿಲ್ಲ. ಇನ್ನಾದರೂ ಸರಿ, ನಮ್ಮ ಅಹವಾಲನ್ನು ವರಿಷ್ಠರ ಗಮನ ಸೆಳೆಯಲು ಹೋರಾಟ ಮಾಡೋಣ. ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಿಕೊಡೋಣ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ದೊರಕಿಸಿಕೊಟ್ಟು ಅವರ ಗೆಲುವಿಗೆ ಪಣ ತೊಡೋಣ.

- ಜಿ.ಎ.ಬಾವಾ, ಮಾಜಿ ಪೊಲೀಸ್ ವರಿಷ್ಠಾಧಿಕಾರಿ

ಮುಸ್ಲಿಮರಿಗೆ ಟಿಕೆಟ್ ಕೇಳುವ ಮುನ್ನ ಅಭ್ಯರ್ಥಿ ಯಾರು ಎಂಬುದನ್ನು ಒಮ್ಮತದ ಮೂಲಕ ತೀರ್ಮಾನಿಸಬೇಕಾಗಿದೆ. ಮುಸ್ಲಿಂ ಜನಪ್ರತಿನಿಧಿಗಳನ್ನು ನಾವು ನಾಯಕರನ್ನಾಗಿ ಬೆಳೆಸಲು ಪ್ರಯತ್ನಿಸಬೇಕೇ ವಿನಃ ಅವರನ್ನು ಕಾಲೆಳೆಯುವ ದುರ್ಷ್ಕತ್ಯ ಮಾಡಬಾರದು. ನಮ್ಮಲ್ಲಿ ಮತದಾರರ ಸಂಖ್ಯೆ ಅಧಿಕವಿದೆ ಎಂದು ಲೆಕ್ಕ ಕೊಟ್ಟರೆ ಸಾಲದು, ಮತದಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕಿದೆ.

- ಮುಹಮ್ಮದ್ ಕುಂಞಿ, ಮುಖಂಡರು, ಜಮಾಅತೆ ಇಸ್ಲಾಮೀ ಹಿಂದ್

ಲೋಕಸಭೆ ಬಿಡಿ, ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲೂ ಟಿಕೆಟ್ ಪಡೆಯಲು ಮುಸ್ಲಿಮರು ಇದೀಗ ಹರಸಾಹಸಪಡಬೇಕಾಗಿದೆ. ಕಳೆದ ಬಾರಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ 20 ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ 1 ಸ್ಥಾನ ಪಡೆಯಲು ಹೋರಾಟವನ್ನೇ ಮಾಡಬೇಕಾಯಿತು. ಹೀಗಾಗಬಾರದು. ನಮ್ಮ ಶಕ್ತಿ ಪ್ರದರ್ಶಿಸುವ ಅವಕಾಶ ಇದಾಗಿದೆ. ಇದನ್ನು ಕೈ ಚೆಲ್ಲಬಾರದು.

-ಕೆ.ಕೆ.ಶಾಹುಲ್ ಹಮೀದ್, ಜಿಪಂ ಸದಸ್ಯರು

ಸದ್ಯದ ಮುಸ್ಲಿಮರ ಜನಸಂಖ್ಯೆಯ ಅನುಪಾತದ ಪ್ರಕಾರ ಲೋಕಸಭೆಯಲ್ಲಿ 73 ಮುಸ್ಲಿಂ ಪ್ರತಿನಿಧಿಗಳಿರಬೇಕಿತ್ತು. ಆದರೆ, ಈಗ ಇರುವುದು ಕೇವಲ 22 ಮಂದಿ ಮಾತ್ರ.ಇದನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ ಭವಿಷ್ಯದಲ್ಲಿ ಇದರ ಬೆಲೆ ತೆರಬೇಕಾಗಿದೆ. ಮುಸ್ಲಿಂ ಮತದಾರರು ಅಧಿಕವಿರುವ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ 7 ಬಾರಿ ಘಟಾನುಘಟಿಗಳು ಸೋಲುಂಡಿದ್ದಾರೆ. ಹಾಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಯು ಕಣಕ್ಕಿಳಿಯುವಂತೆ ಮತ್ತು ಅವರು ಗೆಲ್ಲುವಂತೆ ನಾವು ನೋಡಬೇಕಿದೆ.

- ಮುಝಫ್ಫರ್ ಅಹ್ಮದ್, ಹೈಕೋರ್ಟ್ ವಕೀಲರು

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು

2019ರ ಲೋಕಸಭಾ ಚುನಾವಣೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರದಿಂದ ಜಾತ್ಯತೀತರ ಪರವಾಗಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯೊಬ್ಬರು ಸ್ಪರ್ಧಿಸುವುದು.

ಹೋರಾಟದ ಮುಂದಿನ ಭಾಗವಾಗಿ ಕ್ರಿಯಾ ಸಮಿತಿಯೊಂದನ್ನು ರಚಿಸುವುದು.

ಈ ಕ್ರಿಯಾ ಸಮಿತಿಯ ಮೂಲಕ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಟಿಕೆಟ್‌ಗಾಗಿ ಮನವಿ ಸಲ್ಲಿಸುವುದು.

ಸಚಿವರಾದ ಯು.ಟಿ.ಖಾದರ್, ಜಮೀರ್ ಅಹ್ಮದ್ ಖಾನ್ ಸಹಿತ ಪ್ರಮುಖರು ಹೋರಾಟದಲ್ಲಿ ಭಾಗಿಯಾಗಲು ಮನವಿ ಸಲ್ಲಿಸುವುದು.

ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರೆ ಮುಂದಿನ ಹೋರಾಟಕ್ಕೆ ಸಭೆ ಸೇರಿ ಚರ್ಚೆ ನಡೆಸುವುದು.

ಸಮಿತಿಯು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಪಕ್ಷ, ಸಂಘಟನೆ ಭೇದ ಮರೆತು ಬದ್ಧರಾಗುವುದು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News