ಇತಿಹಾಸದ ‘ಅತ್ಯಂತ ಕೆಟ್ಟ ಮುಚ್ಚಿಹಾಕುವ ಕಾರ್ಯಾಚರಣೆ’: ಟ್ರಂಪ್

Update: 2018-10-24 14:57 GMT

ವಾಶಿಂಗ್ಟನ್, ಅ. 24: ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯನ್ನು ಸೌದಿ ಅರೇಬಿಯ ನಿಭಾಯಿಸಿದ ರೀತಿಯು ‘ಇತಿಹಾಸದ ಅತ್ಯಂತ ಕೆಟ್ಟ ಮುಚ್ಚಿಹಾಕುವ ಕಾರ್ಯಾಚರಣೆ’ಯಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

ಹತ್ಯೆಗೆ ಕಾರಣವಾದ ಸೌದಿ ಅಧಿಕಾರಿಗಳ ವೀಸಾಗಳನ್ನು ರದ್ದುಪಡಿಸುವ ಮೂಲಕ ಅವರನ್ನು ಶಿಕ್ಷಿಸಲು ಮೊದಲ ಹಂತದ ಕ್ರಮಗಳನ್ನು ತನ್ನ ಸರಕಾರ ತೆಗೆದುಕೊಳ್ಳಲು ಮುಂದಾಗಿದೆ ಹಾಗೂ ಹೆಚ್ಚಿನ ಕ್ರಮಗಳನ್ನು ಮುಂದಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರು ನುಡಿದರು.

‘‘ಅವರು ಅತ್ಯಂತ ಕೆಟ್ಟ ಯೋಜನೆ ಹೊಂದಿದ್ದರು. ಅದನ್ನು ಅಷ್ಟೇ ಕೆಟ್ಟದಾಗಿ ಜಾರಿಗೊಳಿಸಲಾಯಿತು. ಬಳಿಕ ಅದನ್ನು ಅವರು ಮುಚ್ಚಿಹಾಕಿದ ರೀತಿಯು ಇತಿಹಾಸದಲ್ಲೇ ಅತ್ಯಂತ ಕೆಟ್ಟದಾಗಿತ್ತು. ಅದೊಂದು ಅತ್ಯಂತ ಕೆಟ್ಟ ಯೋಜನೆಯಾಗಿತ್ತು’’ ಎಂದು ಟ್ರಂಪ್ ಹೇಳಿದರು.

ಸೌದಿ ಶಂಕಿತರ ವೀಸಾ ರದ್ದು: ಅಮೆರಿಕ

ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯಲ್ಲಿ ಶಾಮೀಲಾಗಿರುವರೆನ್ನಲಾದ ಸೌದಿ ಅರೇಬಿಯದ ಅಧಿಕಾರಿಗಳ ವೀಸಾಗಳನ್ನು ರದ್ದುಪಡಿಸುವುದಾಗಿ ಅಮೆರಿಕ ಘೋಷಿಸಿದೆ.

‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಗೆ ಅಂಕಣಗಳನ್ನು ಬರೆಯುತ್ತಿದ್ದ ಖಶೋಗಿ ಇಸ್ತಾಂಬುಲ್‌ನಲ್ಲಿರುವ ತನ್ನ ಕೌನ್ಸುಲೇಟ್‌ನಲ್ಲಿ ಹತ್ಯೆಯಾಗಿದ್ದಾರೆ ಎನ್ನುವುದನ್ನು ಸೌದಿ ಅರೇಬಿಯ ಒಪ್ಪಿಕೊಂಡಿದೆ.

ಹತ್ಯೆಗೆ ಕಾರಣರಾದವರ ಮೇಲೆ ಉತ್ತರದಾಯಿತ್ವ ಹೊರಿಸಲು ಅಮೆರಿಕವು ನಿರಂತರವಾಗಿ ಮಾಹಿತಿಗಳನ್ನು ಸಂಗ್ರಹಿಸಲಿದೆ, ಸಂಸತ್ತು ಕಾಂಗ್ರೆಸ್ ಜೊತೆ ಸಮಾಲೋಚನೆ ನಡೆಸಲಿದೆ ಹಾಗೂ ಇತರ ದೇಶಗಳೊಂದಿಗೆ ಜೊತೆಗೂಡಿ ಕೆಲಸ ಮಾಡಲಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸುದ್ದಿಗಾರರಿಗೆ ತಿಳಿಸಿದರು.

ಅಮೆರಿಕ ಪ್ರಸಕ್ತ ಹೊಂದಿರುವ ಮಾಹಿತಿಗಳ ಆಧಾರದಲ್ಲಿ ಅದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.

ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ: ಜಿ7

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಬಗ್ಗೆ ಸೌದಿ ಅರೇಬಿಯ ಈವರೆಗೆ ನೀಡಿರುವ ವಿವರಣೆಗಳಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದು ‘ಜಿ7’ ಗುಂಪಿನ ದೇಶಗಳ ವಿದೇಶ ಸಚಿವರು ಮಂಗಳವಾರ ನೀಡಿದ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಪತ್ರಕರ್ತನ ಹತ್ಯೆ ಬಗ್ಗೆ ಮೂರು ವಾರಗಳ ಕಾಲ ಮೌನವಾಗಿದ್ದ ಸೌದಿ ಅರೇಬಿಯ, ಶನಿವಾರ ಹೇಳಿಕೆಯೊಂದನ್ನು ನೀಡಿ, ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ 59 ವರ್ಷದ ಪತ್ರಕರ್ತನ ಹತ್ಯೆ ನಡೆದಿರುವುದನ್ನು ಒಪ್ಪಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಹತ್ಯೆಗೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಬೇಕು. ಇಂಥ ಘಟನೆ ಇನ್ನೆಂದೂ ನಡೆಯದಂತೆ ಖಾತರಿಪಡಿಸಲು ಸೌದಿ ಅರೇಬಿಯ ಸೂಕ್ತ ವ್ಯವಸ್ಥೆಯನ್ನು ಜಾರಿಗೊಳಿಸಬೇಕು’’ ಎಂದು ಹೇಳಿಕೆ ತಿಳಿಸಿದೆ.

ಬ್ರಿಟನ್, ಕೆನಡ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕಗಳ ವಿದೇಶ ಸಚಿವರು ಹಾಗೂ ಐರೋಪ್ಯ ಒಕ್ಕೂಟದ ಉನ್ನತ ಪ್ರತಿನಿಧಿ ಹೇಳಿಕೆಗೆ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News