×
Ad

ಮಂಗಳೂರು : ಬಾಮ್ಸನ್ ಇಸಾಖ್ ನಿಧನ

Update: 2018-10-24 20:35 IST

ಮಂಗಳೂರು, ಅ. 24 : ಟೂರಿಸ್ಟ್ ವಾಹನ ಸೇವೆಯಲ್ಲಿ ಪ್ರಸಿದ್ಧ ಸಂಸ್ಥೆಯಾದ ಮ್ಯಾಂಗಲೋರ್ ಟೂರಿಸ್ಟ್ ಸೆರ್ವಿಸಸ್ ( ಎಂಟಿಎಸ್ ) ಇದರ ಮಾಲಕ ಬಾಮ್ಸನ್ ಇಸಾಖ್ ಎಂದೇ ಖ್ಯಾತರಾದ ಮುಹಮ್ಮದ್ ಇಸಾಖ್ (66) ಅವರು ಬುಧವಾರ ಫಳ್ನೀರ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ತಮ್ಮ ತಂದೆ ಬಿ ಮುಹಮ್ಮದ್ ಹಾಜಿ ಅವರು ಪ್ರಾರಂಭಿಸಿದ ಸಂಸ್ಥೆ ಎಂಟಿಎಸ್ ಅನ್ನು ಅವರ ನಿಧನದ ಬಳಿಕ ಯಶಸ್ವಿಯಾಗಿ ಮುನ್ನಡೆಸಿದ ಇಸಾಖ್ ಅವರು ಬಹಳ ಬೇಗ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿ ಜಿಲ್ಲೆಯ ಪ್ರಮುಖ ಟೂರಿಸ್ಟ್ ವಾಹನ ಸೇವಾದಾರರಾಗಿ ಗುರುತಿಸಲ್ಪಟ್ಟರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಹಾಗು ಕೇಂದ್ರ ಸರಕಾರಗಳಿಂದ ಮಾನ್ಯತೆ ಪಡೆದ ಪ್ರಪ್ರಥಮ ಖಾಸಗಿ ಟೂರಿಸ್ಟ್ ವಾಹನ ಸೇವೆ ಸಂಸ್ಥೆಯಾಗಿ ಎಂಟಿಎಸ್ ಪ್ರಸಿದ್ಧಿ ಪಡೆಯಿತು.

70,80ರ ದಶಕಗಳಲ್ಲೇ ಪ್ರತಿಷ್ಠಿತ ಕಾರುಗಳನ್ನು ವಿವಿಧ ಕಂಪೆನಿಗಳಿಗೆ, ಕಾರ್ಯಕ್ರಮಗಳಿಗೆ ಎಂಟಿಎಸ್ ಬಾಡಿಗೆಗೆ ನೀಡುತ್ತಿತ್ತು. ಆಗಲೇ ಭಾರತೀಯ ಕಾರುಗಳಿಗೆ ವಿದೇಶಿ ಕಾರುಗಳ ರೂಪ ನೀಡಿ ಗಮನ ಸೆಳೆದಿದ್ದ ಬಾಮ್ಸನ್ ಇಸಾಖ್ ಅವರು ಜಿಲ್ಲೆಯಲ್ಲಿ ಪ್ರಪ್ರಥಮ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್, ಕರಾವಳಿ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ 1986 ರಲ್ಲಿ ಮಂಗಳೂರಿನಲ್ಲಿ ಪ್ರಪ್ರಥಮ ಕಾರ್ ರ್ಯಾಲಿ ಆಯೋಜಿಸಿ ಅದರ ಟಿವಿ ನೇರ ಪ್ರಸಾರವನ್ನು ರಾಷ್ಟ್ರ ಮಟ್ಟದಲ್ಲಿ ಆಗುವಂತೆ ಮಾಡಿ ಮಿಂಚಿದ್ದರು. ಆಟೋಮೋಟಿವ್ ರೇಸ್ ಗಳಲ್ಲಿ ಭಾಗವಹಿಸುವ ಯುವಜನರಿಗೆ ಅವರು ಸ್ಪೂರ್ತಿಯಾಗಿದ್ದರು. ಕರ್ನಾಟಕ ಹಾಗು ದಕ್ಷಿಣ ಭಾರತದ ವಿವಿಧ ರ್ಯಾಲಿಗಳಲ್ಲಿ ಭಾಗವಹಿಸಿ ಅವರು ಬಹುಮಾನಗಳನ್ನು ಗೆದ್ದಿದ್ದರು.

ಮೃತರು ಪತ್ನಿ, ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News