ಇನ್ನು ಅಸಾಂಜ್ ಪರವಾಗಿ ಬ್ರಿಟನ್ ಜೊತೆ ಮಾತನಾಡುವುದಿಲ್ಲ: ಇಕ್ವೆಡಾರ್

Update: 2018-10-24 15:09 GMT

ಕ್ವಿಟೊ (ಇಕ್ವೆಡಾರ್), ಅ. 24: ಲಂಡನ್‌ನಲ್ಲಿರುವ ಇಕ್ವೆಡಾರ್‌ನ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿರುವ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರ ಆಶ್ರಯಕ್ಕೆ ಸಂಬಂಧಿಸಿ ನಡೆಯಲಿರುವ ಮಾತುಕತೆಯಲ್ಲಿ ತಾನು ಅವರ ಪರವಾಗಿ ಬ್ರಿಟನ್ ಸರಕಾರದ ಜೊತೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಇಕ್ವೆಡಾರ್ ಹೇಳಿದೆ.

ಇಕ್ವೆಡಾರ್ ಸರಕಾರದ ಏಕೈಕ ಜವಾಬ್ದಾರಿ ಎಂದರೆ, ಅಸಾಂಜ್‌ರ ಕ್ಷೇಮವನ್ನು ನೋಡಿಕೊಳ್ಳುವುದು ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಇಕ್ವೆಡಾರ್ ವಿದೇಶ ಸಚಿವ ಜೋಸ್ ವೆಲೆನ್ಶಿಯ ತಿಳಿಸಿದರು.

ಇಕ್ವೆಡಾರ್‌ನ ಲಂಡನ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆಯುತ್ತಿರುವ ತನ್ನ ಮೇಲೆ ಇಕ್ವೆಡಾರ್ ವಿಧಿಸಿರುವ ನೂತನ ಶರತ್ತುಗಳನ್ನು ಅಸಾಂಜ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

‘‘ಇತರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಇಕ್ವೆಡಾರ್ ಹೊಂದಿಲ್ಲ’’ ಎಂದು ವೆಲೆನ್ಶಿಯ ತಿಳಿಸಿದರು. ‘‘ನಾವು ಅಸಾಂಜ್‌ರ ವಕೀಲರಲ್ಲ, ನಾವು ಬ್ರಿಟಿಶ್ ಸರಕಾರದ ಪ್ರತಿನಿಧಿಗಳೂ ಅಲ್ಲ. ಇದು ಅಸಾಂಜ್ ಮತ್ತು ಗ್ರೇಟ್ ಬ್ರಿಟನ್ ಪರಿಹರಿಸಿಕೊಳ್ಳಬೇಕಾದ ವಿಷಯವಾಗಿದೆ’’ ಎಂದರು.

ಇಕ್ವೆಡಾರ್‌ನ ಈ ನಿಲುವು ಹಿಂದಿನ ನಿಲುವಿಗಿಂತ ಭಿನ್ನವಾಗಿದೆ. ಅಸಾಂಜ್‌ಗೆ ಲಂಡನ್‌ನ ದೂತಾವಾಸದಲ್ಲಿ 2012ರಲ್ಲಿ ಆಶ್ರಯ ನೀಡಿದಂದಿನಿಂದ ಇಕ್ವೆಡಾರ್, ಅಸಾಂಜ್‌ರ ಸ್ಥಿತಿಗತಿ ಬಗ್ಗೆ ಬ್ರಿಟಿಶ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News