ಅ.28: ಪುತ್ತೂರಿನಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟ
ಪುತ್ತೂರು, ಅ. 24: ಇನ್ಸಿಟ್ಯೂಟ್ ಆಫ್ ಕರಾಟೆ ಎಂಡ್ ಮಾರ್ಷಲ್ ಆಟ್ರ್ಸ್ (ಐಕೆಎಮ್‍ಎಂ) ಸಂಸ್ಥೆಯ ವತಿಯಿಂದ 3ನೇ ವರ್ಷದ ರಾಜ್ಯಮಟ್ಟದ ಕರಾಟೆ ಸ್ಫರ್ಧಾಕೂಟ ಅ.28ರಂದು ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಫರ್ಧಾಕೂಟದ ಸಂಯೋಜಕ ಶಿವರಂಜನ್ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಂಬೈಯ ಪ್ರಸಿದ್ಧ ಎಲೆಕ್ಟ್ರಿಕಲ್ ಕಂಪನಿಯಾದ ಜಿ.ಎಮ್ ಕಂಪನಿಯ ಪ್ರಾಯೋಜಕತ್ವದಲ್ಲಿ ಈ ಸ್ಪರ್ಧಾಕೂಟ ನಡೆಯಲಿದೆ. ಸ್ಪರ್ಧೆಗೆ ರಾಜ್ಯದ ಸುಮಾರು 400ರಿಂದ 500 ಸ್ಫರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಬೆಲ್ಟ್, ವಯಸ್ಸು ಹಾಗೂ ಭಾರ ಮಿತಿಯ ಒಟ್ಟು 160 ವಿಭಾಗದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು.
ಸ್ಫರ್ಧಾಕೂಟವನ್ನು ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಅವರು ಅಧ್ಯಕ್ಷತೆ ವಹಿಸುವರು. ಸಾಮಾಜಿಕ ಮುಂದಾಳು ಸತ್ಯಜಿತ್ ಸುರತ್ಕಲ್ ಅವರು ಐಕೆಎಮ್‍ಎ ಸಂಸ್ಥೆಯ ವೆಬ್‍ಸೈಟ್ ಉದ್ಘಾಟಿಸಲಿದ್ದಾರೆ. ಪುತ್ತೂರಿನ ಮೈತ್ರಿ ಎಲೆಕ್ಟ್ರಿಕ್ ಕಂಪೆನಿಯ ನಿರ್ದೇಶಕ ಟಿ.ಎಸ್. ಜಯಪ್ರಕಾಶ್ ಹಾಗೂ ಎಂ. ಸತ್ಯನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತ್ಮರಕ್ಷಣೆ ಜತೆಗೆ ಪ್ರಾಮಾಣಿಕತೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಕರಾಟ ತರಬೇತಿ ನೀಡುತ್ತಿರುವ ಇನ್ಸಿಟ್ಯೂಟ್ ಆಫ್ ಕರಾಟೆ ಎಂಡ್ ಮಾರ್ಷಲ್ ಆಟ್ರ್ಸ್ ಸಂಸ್ಥೆಯು ಜಿಎಸ್‍ಕೆಎ ಸಂಸ್ಥೆಯ ಸಹಭಾಗಿತ್ವದಲ್ಲಿ ಕರಾಟೆ ತರಬೇತಿಗಳನ್ನು ಕಳೆದ 3 ವರ್ಷಗಳಿಂದ ನಡೆಸುತ್ತಾ ಬಂದಿದೆ. ಸುಮಾರು 25 ಶಾಖೆಗಳನ್ನು ಹೊಂದಿದ್ದು, ಸುಮಾರು 600ರಷ್ಟು ಸದಸ್ಯರಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಪರ್ಧಾಕೂಟದ ಸಂಯೋಜನಾ ಸಮಿತಿಯ ಅಧ್ಯಕ್ಷ ರವಿನಾರಾಯಣ, ಐಕೆಎಂಎ ಸಂಸ್ಥೆಯ ಮುಖ್ಯಸ್ಥ ನಿತಿನ್ ಎನ್ ಸುವರ್ಣ, ಸಂಯೋಜನಾ ಸಮಿತಿಯ ಸದಸ್ಯ ರಾಜೇಶ್‍ಕೃಷ್ಣ ಶರ್ಮ ಉಪಸ್ಥಿತರಿದ್ದರು.