×
Ad

ಮಣಿಪಾಲ: ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಉದ್ಘಾಟನೆ

Update: 2018-10-24 21:19 IST

 ಮಣಿಪಾಲ, ಅ.24: ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ 25 ವರ್ಷಗಳ ಹಿಂದೆ ಪ್ರಾರಂಭಗೊಂಡ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಿಸಲಾದ ‘ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ’ವನ್ನು ಮಣಿಪಾಲ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಬುಧವಾರ ಇಲ್ಲಿ ಉದ್ಘಾಟಿಸಿದರು.

ಕ್ಯಾನ್ಸರ್ ರೋಗ ಇಂದು ಅತಿವೇಗದಲ್ಲಿ ವಿಸ್ತರಿಸುತ್ತಿದೆ. ಇದಕ್ಕೆ ಜನರ ಜೀವನ ಶೈಲಿಯಲ್ಲಾದ ಬದಲಾವಣೆಯೇ ಪ್ರಮುಖ ಕಾರಣ. ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದರಿಂದ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ ಆಧುನಿಕ ಚಿಕಿತ್ಸೆ ಲಭ್ಯವಿರುವುದರಿಂದ ಅದರ ನಿಯಂತ್ರಣ ಸಾಧ್ಯವಾಗಿದೆ ಎಂದು ಡಾ.ಸುದರ್ಶನ ಬಲ್ಲಾಳ್ ತಿಳಿಸಿದರು.

ಮಣಿಪಾಲದ ಮಾಹೆ ಟ್ರಸ್ಟಿನ ಟ್ರಸ್ಟಿ ಹಾಗೂ ಮಾಹೆ ಹಾಸ್ಟೆಲ್ ನಿರ್ವಹಣಾ ಸಮಿತಿಯ ಅಧ್ಯಕ್ಷೆ ವಸಂತಿ ಆರ್.ಪೈ ಅವರು ಕೇಂದ್ರದ ಧ್ಯೇಯ ಹಾಗೂ ಲಾಂಛನವನ್ನು ಬಿಡುಗಡೆಗೊಳಿಸಿದರು. ಲಾಂಛನದಲ್ಲಿ ಕ್ಯಾನ್ಸರ್ ಆರೈಕೆಯ ನಾಲ್ಕು ಆಧಾರ ಸ್ತಂಭಗಳಾದ ಗುಣಪಡಿಸುವಿಕೆ, ಶಮನ, ತಡೆಗಟ್ಟುವಿಕೆ ಹಾಗೂ ಪುನರ್ವಸತಿಗಳನ್ನು ಚಿತ್ರಿಸಲಾಗಿದೆ.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಅತ್ಯಾಧುನಿಕ ಇಲೆಕ್ಟಾ ವರ್ಸಾ ಎಚ್‌ಡಿ ಲೀನಿಯರ್ ಅಕ್ಸಲರೇಟರ್ ಯಂತ್ರವನ್ನು ಉದ್ಘಾಟಿಸಿದರು. ಇದರಲ್ಲಿ ಕ್ಯಾನ್ಸರ್‌ನ ವಿವಿಧ ಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದ್ದು, ಈ ಚಿಕಿತ್ಸೆ ಕರಾವಳಿ ಭಾಗದಲ್ಲಿ ಮೊದಲ ಬಾರಿ ಲಭ್ಯವಾಗುತ್ತಿದೆ.

ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್‌ನ್ನು ಪತ್ತೆ ಹಚ್ಚುವುದರಿಂದ ಆಧುನಿಕ ಸೌಲಭ್ಯಗಳಿಂದ ಹಾಗೂ ಚಿಕಿತ್ಸಾ ಕ್ರಮಗಳಿಂದ ರೋಗವನ್ನು ಗುಣಪಡಿಸ ಬಹುದಾಗಿದ್ದು, ಕ್ಯಾನ್ಸರ್ ರೋಗಿ ಈಗ ದೀರ್ಘಕಾಲ ಗುಣಮಟ್ಟದ ಜೀವನ ಸಾಗಿಸಲು ಸಾಧ್ಯವಿದೆ. ಇದರಲ್ಲಿ ಆಪ್ತ ಸಮಾಲೋಚನೆಯೂ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಡಾ.ಬಲ್ಲಾಳ್ ತಿಳಿಸಿದರು.

ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಉಪಶಾಮಕ ಹಾಗೂ ಬೆಂಬಲಿತ ಆರೈಕೆ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಕ್ಯಾನ್ಸರ್ ರೋಗದ ಪರಿಣಾಮವನ್ನು ಕೇವಲ ಮೇಲ್ನೋಟಕ್ಕೆ ಅಳೆಯಲು ಸಾಧ್ಯವಿಲ್ಲ. ಅದು ಹಲವು ಆಯಾಮಗಳನ್ನು ಹೊಂದಿರುತ್ತವೆ. ಈ ಕೇಂದ್ರದಲ್ಲಿರುವ ಕಾರ್ಯನಿರ್ವಹಿಸುವ ವಿವಿಧ ವಿಭಾಗಗಳ ಮೂಲಕ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಹಾಗೂ ಆರೈಕೆ ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೆಎಂಸಿ ಮಣಿಪಾಲದ ಡೀನ್ ಡಾ.ಪ್ರಗ್ನಾ ರಾವ್ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಮಾಹೆಯ ಪ್ರೊ ವೈಸ್‌ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಕೆಎಂಸಿ ಆ್ಯಂಕಾಲಜಿ ವಿಭಾಗದ ಡಾ.ನವೀನ್ ಸಾಲಿನ್ಸ್ ಅವರು ಮಾತನಾಡಿದರು.

ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಕೆಎಂಸಿಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News