ಬಡವರ ಹಸಿವು ನಿವಾರಣೆಗೆ ಮಣಿಪಾಲ ಲಯನ್ಸ್ ಕ್ಲಬ್‌ನಿಂದ ವಿಶಿಷ್ಟ ಯೋಜನೆ
ಉಡುಪಿ, ಅ.24: ಮಣಿಪಾಲದ ಆಸುಪಾಸಿನ, ವಿಶೇಷವಾಗಿ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಬಡ ರೋಗಿಗಳ ಸಂಬಂಧಿಕರಿಗೆ ಉಚಿತ ಊಟ-ತಿಂಡಿ ಒದಗಿಸುವ ವಿಶಿಷ್ಟ ಯೋಜನೆಯೊಂದನ್ನು ಮಣಿಪಾಲದ ಲಯನ್ಸ್ ಕ್ಲಬ್ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಪ್ರಾಯೋಗಿಕ ವಾಗಿ ಪ್ರಾರಂಭಿಸಲಿದೆ.
ಮಣಿಪಾಲದ ಟೈಗರ್ ಸರ್ಕಲ್‌ನ ಅಟೋಸ್ಟಾಂಡ್‌ನಲ್ಲಿ ಲಯನ್ಸ್ ಕ್ಲಬ್‌ನ ವತಿಯಿಂದ ಸಮುದಾಯ ಶೀತಲೀಕರಣ ಯಂತ್ರವೊಂದನ್ನು ಇರಿಸಲಿದ್ದು, ಇದರಲ್ಲಿ ಮಣಿಪಾಲ ಆಸುಪಾಸಿನ ಹೊಟೇಲ್‌ಗಳು ನೀಡುವ ತಾಜಾ, ಪೌಷ್ಠಿಕ ಆಹಾರವನ್ನು ಇರಿಸಿ ಅದನ್ನು ಬೆಳಗ್ಗೆ, ಅಪರಾಹ್ನ ಹಾಗೂ ರಾತ್ರಿ ಹಸಿದ ಬಡವರಿಗೆ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷೆ ಸರಿತಾ ಸಂತೋಷ್ ಹಾಗೂ ಹಾಲಿ ಅಧ್ಯಕ್ಷೆ ಸೃತಿ ಶೆಣೈ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಮುದಾಯ ಶೀತಲೀಕರಣ ಯಂತ್ರವನ್ನು ಅ.27ರ ಶನಿವಾರ ಬೆಳಗ್ಗೆ 10ಗಂಟೆಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿದ್ದು, ಲಯನ್ಸ್ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಭಾಸ್ಕರ ಹಂದೆ ಉಪಸ್ಥಿತರಿರುವರು ಎಂದರು.
ಲಯನ್ಸ್‌ನ ಸಹಾಯ ಹಸ್ತ ವೇದಿಕೆ, ಸಿಂಡಿಕೇಟ್ ಬ್ಯಾಂಕ್, ಟ್ಯಾಪ್ಮಿಯ ಸೋಶಿಯಲ್ ಎಂಡೇವರ್ ಗ್ರೂಪ್, ಫುಡ್‌ಜೋನ್ ಹಾಗೂ ಮಣಿಪಾಲ ಅಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ನೆರವಿನಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಆಹಾರವಿಡುವ ಶೀತಲೀಕರಣ ಯಂತ್ರವನ್ನು ಅಟೋರಿಕ್ಷಾ ಚಾಲಕರು ನಿರ್ವಹಿಸಲಿದ್ದಾರೆ ಎಂದರು.
ಪ್ರತಿದಿನ ಬೆಳಗ್ಗೆ 10ರಿಂದ ನಿಗದಿತ ಮಂದಿಗೆ ಬೆಳಗಿನ ತಿಂಡಿ, ಅಪರಾಹ್ನ 2ರಿಂದ ಊಟ ಹಾಗೂ ರಾತ್ರಿ 8ರಿಂದ ರಾತ್ರಿ ಊಟ ಇಲ್ಲಿ ಲಭ್ಯವಿರುತ್ತದೆ. ಆಹಾರದ ಅಗತ್ಯವುಳ್ಳ ಬಡವರಿಗೆ ಈ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ಎಲ್ಲರ ಸಹಕಾರವನ್ನು ಕೋರುತ್ತೇವೆ ಎಂದು ಸರಿತಾ ಸಂತೋಷ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಲಯನ್ಸ್ ಕ್ಲಬ್‌ನ ಋತು ಚಾಬ್ರಿಯಾ, ಮಾಜಿ ಅಧ್ಯಕ್ಷ ಗಣೇಶ ಪೈ, ಟ್ಯಾಪ್ಮಿಯ ವಿಕಾಸ್ ಹಾಗೂ ಮೈತ್ರೆಯಿ ಅಡಿಗ ಉಪಸ್ಥಿತರಿದ್ದರು.