×
Ad

ಅ.27, 28: ಬ್ರಹ್ಮಾವರದಲ್ಲಿ ಕೃಷಿ ಮೇಳ-2018

Update: 2018-10-24 22:19 IST

ಉಡುಪಿ, ಅ.24: ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಪ್ರತಿ ವರ್ಷ ನಡೆಯುವ ಕೃಷಿ ಮೇಳ, ಕೃಷಿಗೆ ಸಂಬಂಧಿ ಸಿದ ವಿವಿಧ ವಸ್ತು ಹಾಗೂ ಉಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಈ ಬಾರಿ ಅ.27 ಮತ್ತು 28ರಂದು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಮತ್ತು ಉಳ್ಳಾಲ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಡಿಪ್ಲೋಮ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಮಂಗಳೂರು, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ, ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಕೆನರಾ ಬ್ಯಾಂಕ್ ಬ್ರಹ್ಮಾವರ ಮತ್ತು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವುಗಳ ಸಹಯೋಗದಲ್ಲಿ ಈ ಬಾರಿಯ ಕೃಷಿ ಮೇಳ ನಡೆಯಲಿದೆ ಎಂದವರು ನುಡಿದರು.

ಕೃಷಿ ಮೇಳದ ಮುಖ್ಯ ಉದ್ದೇಶ ನೂತನ ಕೃಷಿ ತಂತ್ರಜ್ಞಾನಗಳನ್ನು ನೋಡಿ ತಿಳಿಯುವುದು, ಚರ್ಚಾಗೋಷ್ಠಿಗಳ ಮೂಲಕ ಕೃಷಿ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದು, ಕ್ಷೇತ್ರ ಭೇಟಿಗಳ ಮುಖಾಂತರ ಬೆಳೆ ಪ್ರಾತ್ಯಕ್ಷಿಕೆಗಳನ್ನು ನೋಡಿ ಅಲ್ಲಿಯ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು. ಒಟ್ಟಾರೆ ಈ ಕೃಷಿ ಮೇಳ ಕೃಷಿಕರ ಹಬ್ಬ, ಅನ್ನದಾತನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವೇದಿಕೆಯನ್ನು ಕಲ್ಪಿಸುವುದಾಗಿದೆ ಎಂದು ಡಾ.ಪಾಟೀಲ್ ತಿಳಿಸಿದರು.

ಕೃಷಿಮೇಳವನ್ನು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿದ್ದಾರೆ. ಕೃಷಿ ವಸ್ತು ಪ್ರದರ್ಶನವನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ನಾಯ್ಕಾ ಉದ್ಘಾಟಿ ಸುವರು. ಕೃಷಿ ಯಂತ್ರ ಮೇಳದ ಉದ್ಘಾಟನೆಯನ್ನು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಾಪಶಿ ನೆರವೇರಿಸುವರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಪಿ.ನಾರಾಯಣ ಸ್ವಾಮಿ, ಕೃಷಿ ವಿಸ್ತರಣಾ ನಿರ್ದೇಶಕ ಡಾ. ಟಿ. ಹೆಚ್. ಗೌಡ, ಸಂಶೋಧನಾ ನಿರ್ದೇಶಕ ಡಾ. ಬಿ.ಆರ್. ಗುರುಮೂರ್ತಿ ಭಾಗವಹಿಸಲಿದ್ದಾರೆ. ಪ್ರಗತಿಪರ ಕೃಷಿಕರಾದ ರಾಮಕೃಷ್ಣ ಶರ್ಮ, ಬಿ.ವಿ. ಪೂಜಾರಿ, ಸತೀಶ್ ಕುಮಾರ್ ಶೆಟ್ಟಿ, ಗುಣಪಾಲ ಕಡಂಬ ಮತ್ತು ಶಂಭುಶಂಕರ್ ರಾವ್ ಉಪಸ್ಥಿತರಿರುವರು.

ಮೇಳದಲ್ಲಿ ಮೊದಲ ದಿನ ಕೃಷಿ ವಸ್ತು ಪ್ರದರ್ಶನ ಮಳಿಗೆಗಳ ಮತ್ತು ಸಮಗ್ರ ಕೃಷಿ ಘಟಕಗಳ ಕ್ಷೇತ್ರ ಭೇಟಿಯನ್ನು ಆಯೋಜಿಸಲಾಗಿದೆ. ಅಲ್ಲದೇ ಕೃಷಿಗೆ ಸಂಬಂಧಿಸಿದಂತೆ ವಿವಿಧ ಕೃಷಿ ವಿಷಯಗಳ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಮೂರು ವಿಚಾರ ಸಂಕಿರಣಗಳಲ್ಲಿ ಇಲಾಖಾ ಮುಖ್ಯಸ್ಥರು, ಹಿರಿಯ ವಿಜ್ಞಾನಿಗಳು ಮತ್ತು ರಾಷ್ಟ್ರೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಭಾಗವಹಿಸಿ ಮಾಹಿತಿಯನ್ನು ನೀಡಲಿದ್ದಾರೆ. ಇದರಲ್ಲಿ ರೈತರೊಂದಿಗೆ ಮುಕ್ತ ಚರ್ಚೆಯನ್ನು ಆಯೋಜಿಸಲಾಗಿದ್ದು, ಪ್ರಗತಿಪರ ರೈತರು ತಮ್ಮ ಅನುಭವಗಳನ್ನು ಮಂಡಿಸುವರು.

ಕೃಷಿಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಲಿವೆ. ಎರಡು ದಿನಗಳಲ್ಲಿ ಅಂದಾಜು ಒಂದೂವರೆ ಲಕ್ಷಕ್ಕೂ ಅಧಿಕ ರೈತರು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಡಾ.ಪಾಟೀಲ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆವಿಕೆಯ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ, ಬ್ರಹ್ಮಾವರ ಡಿಪ್ಲೋಮ ಕೃಷಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಧೀರ್ ಕಾಮತ್ ಉಪಸ್ಥಿತರಿದ್ದರು.

ಕೃಷಿ ಮೇಳದ ಆಕರ್ಷಣೆಗಳು

*ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಮೇವಿನ ಬೆಳೆ ಉತ್ಪಾದನೆ, *ವಿವಿಧ ಭತ್ತದ ತಳಿಗಳು ಮತ್ತು ಬೀಜೋತ್ಪಾದನೆ, *ಭತ್ತದಲ್ಲಿ ಚಾಪೆ ನೇಜಿ ತಯಾರಿ ಮತ್ತು ಶ್ರೀಪದ್ಧತಿ ಬೇಸಾಯ, *ಸಿಓ-4 ಮೇವಿನ ಹುಲ್ಲಿನ ಪ್ರಾತ್ಯಕ್ಷಿಕೆ, *ತೆಂಗಿನಲ್ಲಿ ಬಹು ಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆ, *ಗೇರು ಕಸಿ ಕಟ್ಟುವಿಕೆ, ತೋಟದಲ್ಲಿ ನೀರು ಹಾಗೂ ಮಣ್ಣು ಸಂರಕ್ಷಣೆ, *ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರ ಮತ್ತು ಅಜೋಲ್ಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ, *ಹೈನುಗಾರಿಕೆ, ಮೀನುಗಾರಿಕೆ, ಆಡು, ಮೊಲ, ಕೋಳಿ, ಹಂದಿ ಮತ್ತು ಬಾತುಕೋಳಿ ಸಾಕಾಣಿಕೆ ಪ್ರಾತ್ಯಕ್ಷಿಕೆ, *ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, * ಜೈವಿಕ ಅನಿಲ ಉತ್ಪಾದನಾ ಘಟಕಗಳು, *ಆಕರ್ಷಕ ಕೃಷಿ ವಸ್ತು ಪ್ರದರ್ಶನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News