​ಬೀದಿ ನಾಯಿ ವಿಚಾರದಲ್ಲಿ ಕೊಲೆ; ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆ

Update: 2018-10-24 17:07 GMT

ಮಂಗಳೂರು, ಅ.24: ಬೀದಿ ನಾಯಿ ಮತ್ತು ಬೆಕ್ಕುಗಳಿಗೆ ಆಹಾರ ನೀಡುತ್ತಿದ್ದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವ್ಯಕ್ತಿಯನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ್ದ ಬೆಳ್ತಂಗಡಿ ತಾಲೂಕಿನ ಎಂಬಿಎ ವಿದ್ಯಾರ್ಥಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂಬಿಎ ವಿದ್ಯಾರ್ಥಿಯಾಗಿದ್ದು, ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪಿ.ಚಂದ್ರಶೇಖರ (23) ಶಿಕ್ಷೆಗೊಳಗಾದ ಅಪರಾಧಿ.

ಈತ ತನ್ನ ನೆರೆಯಲ್ಲಿ ವಾಸಿಸುತ್ತಿದ್ದ ಬಿಎಸ್ಸೆನ್ನೆಲ್ ಲೈನ್‌ಮನ್ ತಿಮ್ಮಪ್ಪ ಪೂಜಾರಿ ಎಂಬರನ್ನು 2017ರ ಜೂ.7ರಂದು ತಲವಾರಿನಿಂದ ಕಡಿದು ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಚಾರ್ಯ ಶಿಕ್ಷೆ ಪ್ರಕಟಿಸಿದರು.

ಮೃತರ ಪತ್ನಿ ಚಂಪಾವತಿ ನೀಡಿದ್ದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ತಂಗಡಿ ಠಾಣೆ ಪೊಲೀಸರು, ಚಂದ್ರಶೇಖರ್‌ನನ್ನು ಬಂಧಿಸಲಾಗಿತ್ತು. ಕೃತ್ಯವನ್ನು ಪ್ರತ್ಯಕ್ಷವಾಗಿ ಕಂಡಿದ್ದ ಮೃತನ ಇಬ್ಬರು ಮಕ್ಕಳು, ಪತ್ನಿ ಸೇರಿದಂತೆ 23 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.

ಕೊಲೆ ಮಾಡಿರುವುದಕ್ಕಾಗಿ ಅಪರಾಧಿಗೆ ಕಠಿಣ ಜೀವವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗಿದೆ. ಸಾಕ್ಷಿಗಳಿಗೆ ಬೆದರಿಕೆ ಹಾಕಿರುವುದಕ್ಕಾಗಿ ಐದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ.ದಂಡ ವಿಧಿಸಿದರು. ಮೃತನ ಕುಟುಂಬದವರಿಗೆ ಸಂತ್ರಸ್ತರ ಪರಿಹಾರ ಕಾಯ್ದೆಯಡಿ ಪರಹಾರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನವನ್ನೂ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News