ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ-ನರಸಿಂಹ ಮಠದ ವಿವಾದ: ಸಂಘ ಪರಿವಾರದ ಸಂಘಟನೆಗಳ ನಡುವೆ ಗಲಾಟೆ

Update: 2018-10-24 18:04 GMT

ಸುಬ್ರಹ್ಮಣ್ಯ, ಅ.24: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದಕ್ಕೆ ಸಂಬಂಧಿಸಿ ಸಂಘ ಪರಿವಾರದ ಸಂಘಟನೆಗಳ ಮಧ್ಯೆಯೇ ಬುಧವಾರ ಸಂಜೆ ಗಲಾಟೆ ನಡೆದಿದ್ದು, ಓರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಗಾಯಗೊಂಡಿದ್ದು, ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧಿಸಿ ಸಂಘ ಪರಿವಾರದ ನಾಯಕಿ ಚೈತ್ರಾ ಕುಂದಾಪುರ ಸಹಿತ ಏಳು ಮಂದಿಯನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಘಟನೆಯನ್ನು ಖಂಡಿಸಿ ಗುರುವಾರ ಸುಬ್ರಹ್ಮಣ್ಯ ಬಂದ್‌ಗೆ ನಗರದ ವರ್ತಕರು, ಕೆಲವು ಸಂಘಟನೆಗಳು ಕರೆ ನೀಡಿವೆ.

ಘಟನೆ ವಿವರ

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯ ವಿಚಾರಕ್ಕೆ ಸಂಬಂಧಿಸಿ ಸಂಘ ಪರಿವಾರದ ಎರಡು ಗುಂಪುಗಳ ನಡುವೆ ಇತ್ತೀಚೆಗೆ ವೈಮನಸ್ಸು ಏರ್ಪಟ್ಟಿತ್ತು. ಈ ವಿಚಾರದಲ್ಲಿ ಚೈತ್ರಾ ಕುಂದಾಪುರ ಮಠದ ಪರವಾಗಿ ಮಾತನಾಡುತ್ತಾ ದೇವಸ್ಥಾನದ ಸರ್ಪ ಸಂಸ್ಕಾರ ವಿಧಿಯ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿದ್ದಳೆನ್ನಲಾಗಿದೆ. ಬಳಿಕ ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ ವಿರೋಧ ಚರ್ಚೆಗಳು ನಡೆದಿದ್ದವು.

ಇದೇ ವಿಚಾರವಾಗಿ ಗುರುಪ್ರಸಾದ್ ಪಂಜ ಹಾಗೂ ಚೈತ್ರಾ ನಡುವೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಿರಂತರ ವಾಗ್ವಾದ ನಡೆಯುತ್ತಿತ್ತು. ಬಳಿಕ ಇವರೊಳಗೆ ಈ ವಿಚಾರದಲ್ಲಿ ದೂರವಾಣಿ ಮೂಲಕ ಚರ್ಚೆಯಾಗಿ ಪರಸ್ಪರ ಸವಾಲು ಹಾಕುವ ಮಟ್ಟಕ್ಕೆ ತಲುಪಿದೆ. ಇದರ ಮುಂದುವರಿದ ಭಾಗವಾಗಿ ಚೈತ್ರಾ ಕುಂದಾಪುರ ಹಾಗೂ ತಂಡ ಬುಧವಾರ ಸಂಜೆ ಸುಬ್ರಹ್ಮಣ್ಯಕ್ಕೆ ಆಗಮಿಸಿದೆ. ಸುಬ್ರಹ್ಮಣ್ಯ ಕಾಶಿಕಟ್ಟೆ ಎಂಬಲ್ಲಿ ಚೈತ್ರಾ ಮತ್ತು ಗುರುಪ್ರಸಾದ್ ಬೆಂಬಲಿಗರ ತಂಡವನ್ನು ಪರಸ್ಪರ ಸಂಧಿಸಿದ್ದು, ಇವರೊಳಗೆ ವಾಗ್ವಾದ ನಡೆದಿದೆ. ಇದು ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಚೈತ್ರಾ ಬೆಂಬಲಿಗ ತಂಡದ ಓರ್ವ ಕಬ್ಬಿಣದ ರಾಡ್‌ನಿಂದ ಗುರುಪ್ರಸಾದ್ ಮೇಲೆ ಹಲ್ಲೆ ನಡೆಸಿದನೆನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಚೈತ್ರಾ ಕುಂದಾಪುರ ಹಾಗೂ ತಂಡದ ಕೃತ್ಯವನ್ನು ಖಂಡಿಸಿ ತಡರಾತ್ರಿ ಸುಬ್ರಹ್ಮಣ್ಯದ ನಾಗರಿಕರು ಮೆರವಣಿಗೆ ನಡೆಸಿದರು. ಘಟನೆ ಕುರಿತಂತೆ ರಾತ್ರಿಯವರೆಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಯಾವುದೇ ದೂರು ಸ್ವೀಕಾರವಾಗಿಲ್ಲ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ ಆಕೆಯ ಬೆಂಬಲಿಗರೆನ್ನಲಾದ ಕುಂದಾಪುರ ಮೂಲದ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಕುರಿತು ಸತ್ಯಾಸತ್ಯತೆಯ ಮಾಹಿತಿ ಪಡೆದು ಮುಂದಿನ ಕ್ರಮ ಜರಗಿಸಲಾಗುವುದು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News