ಕಟಪಾಡಿ ಮಸೀದಿ ಅಧ್ಯಕ್ಷರ ಆಯ್ಕೆ ಗೊಂದಲ: ಗುಂಡು ಹಾರಾಟ ನಡೆಸಿ ಆತಂಕ ಸೃಷ್ಟಿಸಿದ ವ್ಯಕ್ತಿ

Update: 2018-10-24 18:11 GMT
ಸಾಂದರ್ಭಿಕ ಚಿತ್ರ

ಪಡುಬಿದ್ರೆ, ಅ.24: ಕಟಪಾಡಿ ಜಮಾಅತ್ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ಉಂಟಾಗಿ ವ್ಯಕ್ತಿಯೋರ್ವ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ಘಟನೆ ವಿವರ

ಕಟಪಾಡಿ ಜಮಾಅತ್‌ಗೆ ಇತ್ತೀಚೆಗೆ ಅಧ್ಯಕ್ಷರ ಆಯ್ಕೆ ನಡೆದಿದ್ದು, ಅದರಂತೆ ಕೆ.ಪಿ.ಎಚ್.ಇಸ್ಮಾಯೀಲ್ ಎಂಬವರು ಸರ್ವಾನುಮತದಿಂದ ಆಯ್ಕೆಗೊಂಡಿ ದ್ದರು. ಆದರೆ ಇದನ್ನು ವಿರೋಧಿಸಿದ್ದ ಸರಕಾರಿ ಗುಡ್ಡೆಯ ಅಕ್ಬರ್ ಎಂಬಾತ ಇಸ್ಮಾಯೀಲ್‌ಗೆ ದೂರವಾಣಿ ಕರೆ ಮಾಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬೆದರಿಕೆಯೊಡ್ಡಿದ್ದನೆನ್ನಲಾಗಿದೆ. ಈ ವಿಚಾರವನ್ನು ಇಸ್ಮಾಯೀಲ್‌ ಜಮಾಅತ್ ಮುಂದಿಟ್ಟಿದ್ದರು. ಕಳೆದ ಶುಕ್ರವಾರ ಈ ಬಗ್ಗೆ ಮಾತುಕತೆ ನಡೆದು ಇಸ್ಮಾಯೀಲ್‌ರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲು ಸಭೆ ತಿರ್ಮಾನಿಸಲಾಯಿತು. ಈ ಸಂದರ್ಭ ಅಕ್ಬರ್ ಕ್ಷಮೆ ಕೂಡಾ ಯಾಚಿಸಿದ್ದನೆನ್ನಲಾಗಿದೆ.

ಬಳಿಕ ಹಠಾತ್ ಬೆಳವಣಿಗೆಯೊಂದರಲ್ಲಿ ಇಸ್ಮಾಯೀಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ ಅವರ ರಾಜೀನಾಮೆ ಅಂಗೀಕಾರ ದೊರೆತಿದ್ದು, ನೂತನ ಅಧ್ಯಕ್ಷರ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಅಕ್ಬರ್ ತನ್ನ ಆಪ್ತ ಹಮೀದ್ ಎಂಬರನ್ನು ಸೂಚಿಸಿದರೆನ್ನಲಾಗಿದೆ. ಇದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಅಧ್ಯಕ್ಷರ ಆಯ್ಕೆ ಮತದಾನದ ಮೂಲಕ ನಡೆಯಲಿ ಎಂದು ಪಟ್ಟು ಹಿಡಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಅಕ್ಬರ್ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಭಯದ ವಾತಾವರಣ ಸೃಷ್ಟಿಸಿದರೆನ್ನಲಾಗಿದೆ.

ಬಳಿಕ ನಡೆದ ತಳ್ಳಾಟದಲ್ಲಿ ಅಕ್ಬರ್ ಹಾಗೂ ಅನ್ವರ್ ಎಂಬವರು ಗಾಯಗೊಂಡಿದ್ದು, ಅವರು ಆಸ್ಪತ್ರೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News