ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಮುಂದುವರಿದ ಧರಣಿ
ಮಂಗಳೂರು,ಅ.25: ಸುರತ್ಕಲ್ನ ಅಕ್ರಮ ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುರತ್ಕಲ್ ಜಂಕ್ಷನ್‌ನಲ್ಲಿ ಸೋಮವಾರದಿಂದ ಹಗಲು-ರಾತ್ರಿ ನಡೆಯುತ್ತಿರುವ ಧರಣಿ ಮುಂದುವರಿಯುತ್ತಿದೆ.
ಟೋಲ್ಗೇಟ್ ಗುತ್ತಿಗೆ ನವೀಕರಣದ ವಿರುದ್ಧದ ಹೋರಾಟ ತೀವ್ರಗೊಳ್ಳುತ್ತಿರುವ ಮಧ್ಯೆಯೆ ಹೆದ್ದಾರಿ ಪ್ರಾಧಿಕಾರ 1 ವರ್ಷದ ಮಟ್ಟಿಗೆ ಟೋಲ್ಗುತ್ತಿಗೆಯನ್ನು ಮತ್ತೊಮ್ಮೆ ನವೀಕರಿಸಿದ ಸುದ್ದಿ ಹೊರಬಿದ್ದಿರುವುದು ಧರಣಿ ನಿರತರ ಆಕ್ರೋಶಕ್ಕೆ ಕಾರಣವಾಯಿತು.
ಈ ಮಧ್ಯೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಹೋರಾಟಗಾರರ ಬೇಡಿಕೆಗೆ ಸಹಾನುಭೂತಿ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಪರವಾಗಿ ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಧರಣಿ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಆಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ಬೇಡಿಕೆ ನ್ಯಾಯಯುತವಾಗಿದ್ದಾಗ ಹೋರಾಟ ನೈತಿಕವಾಗಿ ಗೆಲ್ಲುತ್ತದೆ. ಫಲಿತಾಂಶ ಸ್ವಲ್ಪ ತಡವಾದರೂ ಹಿಂಜರಿಯಬಾರದು. ಸಂಸದರು ಜನತೆಯ ಬೇಡಿಕೆಗಳಿಗೆ ಕುರುಡಾಗಿದ್ದಾರೆ ಎಂದರು.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ ಜಿಲ್ಲಾಡಳಿತದ ಪರವಾಗಿ ಸಹಾಯಕ ಆಯುಕ್ತರು ಸ್ಥಳಕ್ಕೆ ಆಗಮಿಸಿದ್ದು, ಉಸ್ತುವಾರಿ ಸಚಿವರು ಫೋನ್ ಮೂಲಕ ಸಹಾನುಭೂತಿ ವ್ಯಕ್ತಪಡಿಸಿದ್ದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೂ ಜನಾಭಿಪ್ರಾಯಕ್ಕೆ ವಿರುದ್ದವಾಗಿ ನಿಯಮಬಾಹಿರವಾಗಿ ಟೋಲ್ ಗುತ್ತಿಗೆಯನ್ನು ಮತ್ತೊಮ್ಮೆ ನವೀಕರಿಸಿರುವುದು ಜಿಲ್ಲೆಯ ಜನರಿಗೆ ಮಾಡಿದ ಘೋರ ಅನ್ಯಾಯವಾಗಿದೆ. ಸಂಸದರ ನೀಡಿದ ಭರವಸೆಗಳೆಲ್ಲ ಸುಳ್ಳೆಂದು ಈ ಮೂಲಕ ಸಾಬೀತಾಗಿದೆ. ಸಂಸದ ನಳಿನ್ ಟೋಲ್ ಮಾಫಿಯಾದ ಕೈಗೊಂಬೆಯಾಗಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಸಂಸದರು ತನ್ನ ವೈಫಲ್ಯವನ್ನು ಒಪ್ಪಿಕೊಂಡು ರಾಜಿನಾಮೆ ನೀಡಲಿ. ಮುಂದಿನ ಹೋರಾಟವು ಮಾತು ತಪ್ಪಿದ ಸಂಸದರ ವಿರುದ್ದವೇ ನಡೆಯಲಿದೆ ಎಂದರು.
ನಾಲ್ಕನೆ ದಿನದ ಧರಣಿಯಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕೆನರಾ ಚೇಂಬರ್ಸ್ ಆಫ್ ಕಾಮರ್ಸ್‌ನ ಮಾಜಿ ಅಧ್ಯಕ್ಷ ಆರ್.ಡಿ. ಕಿಣಿ, ನ್ಯಾಯವಾದಿ ಸುಲಜಾ ಕಿಣಿ, ಆನ್‌ಲೈನ್ ಟ್ಯಾಕ್ಸಿ ಯೂನಿಯನ್‌ನ ಅಧ್ಯಕ್ಷ ಸತ್ಯೇಂದ್ರ ಶೆಟ್ಟಿ, ಉಪಾಧ್ಯಕ್ಷ ಮುನವ್ವರ್ ಕುತ್ತಾರ್, ಪದಾಧಿಕಾರಿಗಳಾದ ವೈ. ಶಿವ, ಕಮಾಲಾಕ್ಷ ಬಜಾಲ್, ಅಬೂಬಕ್ಕರ್ ಕಾಟಿಪಳ್ಳ, ಸುರತ್ಕಲ್ ಮ್ಯಾಕ್ಸಿಕ್ಯಾಬ್ ಅಸೋಷಿಯೇಶನ್ ಮುಖಂಡ ಲೋಕೇಶ್, ಸುರತ್ಕಲ್ ಟ್ಯಾಕ್ಸಿ ಚಾಲಕರ ಸಂಘದ ಮಾಜಿ ಅಧ್ಯಕ್ಷ ಕೃಷ್ಣ, ದಲಿತ ಮುಖಂಡ ಶೇಖರ ಹೆಜಮಾಡಿ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಸತ್ತಾರ್, ಶ್ರೀಕಾಂತ್ ಸಾಲ್ಯಾನ್, ಹುಸೈನ್ ಕಾಟಿಪಳ್ಳ, ವಿಜಯ ಅರಾನ್ಹ, ಬಿ.ಕೆ. ಹಿದಾಯತ್, ತ್ರಿಚಕ್ರ ಟೆಂಪೊ ಚಾಲಕರ ಸಂಘದ ಉಮರ್ ಫಾರೂಕ್, ನೀಲಯ್ಯ, ಇಸ್ಮಾಯಿಲ್ ಎಂ.ಡಿ., ಗೂಡ್ಸ್ ಟೆಂಪೊ ಚಾಲಕರ ಸಂಘದ ಪ್ರಕಾಶ್, ಜಾನ್ ಡಿಸೋಜ, ತಾಪಂ ಸದಸ್ಯ ಬಶೀರ್ ಬಿ.ಎಸ್., ಜೋಕಟ್ಟೆ ಗ್ರಾಪಂ ಉಪಾಧ್ಯಕ್ಷ ಸಂಶುದ್ದೀನ್ ಜೋಕಟ್ಟೆ, ಮನಪಾ ಸದಸ್ಯರಾದ ರೇವತಿ ಪುತ್ರನ್, ಪ್ರತಿಭಾ ಕುಳಾಯಿ, ದಯಾನಂದ ಶೆಟ್ಟಿ, ಹೋರಾಟ ಸಮಿತಿಯ ಪ್ರಮುಖರಾದ ಬಿ.ಕೆ. ಇಮ್ತಿಯಾಝ್, ವೈ. ರಾಘವೇಂದ್ರ ರಾವ್, ರಾಜೇಶ್ ಶೆಟ್ಟಿ ಪಡ್ರೆ, ನವೀನ್ ಕೊಂಚಾಡಿ, ಅಜ್ಮಲ್ ಕಾನ, ಮುಸ್ತಫಾ ಬೈಕಂಪಾಡಿ, ಹಮೀದ್ ಕಟ್ಲ, ಅಬೂಸಾಲಿ ಕೃಷ್ಣಾಪುರ ಮತ್ತಿತರು ಉಪಸ್ಥಿತರಿದ್ದರು.