×
Ad

ಹಕ್ಕೊತ್ತಾಯಕ್ಕಾಗಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಂದ ಧರಣಿ ಸತ್ಯಾಗ್ರಹ

Update: 2018-10-25 19:12 IST

ಉಡುಪಿ, ಅ.25: ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು ಮತ್ತು ಗುತ್ತಿಗೆ ನೌಕರರಿಗೆ ಸಮಾನ ವೇತನ ಹಾಗೂ ಸೇವಾ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಕ್ಕಾಗಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಯ ಗುತ್ತಿಗೆ ನೌಕರರ ವೇದಿಕೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳ ಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯ ಸರಕಾರದ ಆರೋಗ್ಯ ಕ್ಷೇತ್ರದ ಬಜೆಟ್‌ನ್ನು ಶೇ.15ಕ್ಕೆ ಏರಿಸಬೇಕು. ಗುತ್ತಿಗೆ ನೌಕರರಿಗೆ ನಿವೃತ್ತಿಯ ವಯಸ್ಸಿನವರೆಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡ ಬೇಕು. ಹೊರಗುತ್ತಿಗೆಯಲ್ಲಿರುವ ಎಲ್ಲರಿಗೆ ಗುತ್ತಿಗೆದಾರರ ಮಧ್ಯವರ್ತಿ ಇಲ್ಲದೆ ನೇರವಾಗಿ ಇಲಾಖೆಯಿಂದ ವೇತನ ಪಾವತಿ ಮಾಡಬೇಕು ಎಂದರು.

ಸರಕಾರಿ ನೌಕರರಿಗೆ ನೀಡುವ ಜ್ಯೋತಿ ಸಂಜೀವಿನಿ ವೈದ್ಯಕೀಯ ಯೋಜನೆ ಯನ್ನು ಗುತ್ತಿಗೆ ನೌಕರರಿಗೂ ಒದಗಿಸಬೇಕು. ಗುತ್ತಿಗೆ ನೌಕರರಿಗೆ ಸರಕಾರಿ ನೇಮ ಕಾತಿಗಳಲ್ಲಿ ವಯಸ್ಸಿನ ಮಿತಿಯನ್ನು ವಿಸ್ತರಿಸಬೇಕು. ಸೇವಾ ಅನುಭವಕ್ಕೆ ತಕ್ಕಂತೆ ಸೇವಾಂಕ ನೀಡಬೇಕು. ಖಾಯಂ ನೇಮಕಾತಿಯ ಕಾರಣ ಹೇಳಿ ಸ್ಥಳ ಬದ ಲಾವಣೆ ಮಾಡಬಾರದು. ಕಳೆದ ಒಂದು ವರ್ಷದ ಅವಧಿಯಲ್ಲಿ ಸೇವೆಯಿಂದ ತೆಗೆದಿರುವವರನ್ನು ಮತ್ತೆ ಅದೇ ಹುದ್ದೆಗೆ ಮರು ನೇಮಕ ಮಾಡಿಕೊಳ್ಳಬೇಕು. ಆರೋಗ್ಯ ಕರ್ನಾಟಕ ಯೋಜನೆಯಡಿ ಬಹುತೇಕ ಸರಕಾರಿ ಆಸ್ಪತ್ರೆಗಳನ್ನೇ ಎಂಪ್ಯಾನೆಲ್ ಮಾಡಿಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ಗುತ್ತಿಗೆ ನೌಕರರಿಗೆ ಆಗುವ ಶೋಷಣೆಯನ್ನು ತಡೆಯಲು ಸಮಿತಿ ರಚಿಸಬೇಕೆಂದು ಅವರು ಆಗ್ರಹಿಸಿದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗೆ ಸಲ್ಲಿಸಲಾಯಿತು. ಸ್ಥಳಕ್ಕೆ ಶಾಸಕರುಗಳಾದ ರಘುಪತಿ ಭಟ್, ಸುನೀಲ್ ಕುಮಾರ್, ಸುಕುಮಾರ್ ಶೆಟ್ಟಿ ಆಗಮಿಸಿ ಮನವಿ ಸ್ವೀಕರಿಸಿ ದರು. ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರೀತಂ ಬಿ.ಎಸ್., ಪ್ರಧಾನ ಕಾರ್ಯದರ್ಶಿ ಮಹಬಲೇಶ್, ಕೋಶಾಧಿಕಾರಿ ಗಿರೀಶ್ ಕಡ್ಡಿಪುಡಿ, ಉಪಾಧ್ಯಕ್ಷೆ ಸೌಮ್ಯಶ್ರೀ, ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News