ಚೈತ್ರಾ ಕುಂದಾಪುರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
Update: 2018-10-25 19:18 IST
ಉಡುಪಿ, ಅ.25: ದೇವಸ್ಥಾನದ ಸಂಪ್ರದಾಯವನ್ನು ತಮ್ಮ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುವ ಮತ್ತು ಮಾರಕಾಸ್ತ್ರಗಳಿಂದ ಗುಂಪಿನೊಂದಿಗೆ ಹಲ್ಲೆ ನಡೆಸಿ ದೇವಸ್ಥಾನದಲ್ಲಿ ಅಶಾಂತಿ ಸೃಷ್ಠಿಸುವ ಚೈತ್ರ ಕುಂದಾಪುರ ವರ್ತನೆ ಖಂಡನೀಯ. ಸುಬ್ರಹ್ಮಣ್ಯದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸಿ, ಹಲ್ಲೆ ಮಾಡಿದ ಚೈತ್ರಾ ಮತ್ತು ಇತರರ ಬಗ್ಗೆ ಸೂಕ್ತ ತನಿಖೆ ಮಾಡ ಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ ಆಗ್ರಹಿಸಿದ್ದಾರೆ
ಈ ಹಿಂದೆ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಸಂದರ್ಭದಲ್ಲಿ ಅಶಾಂತಿ ಸೃಷ್ಟಿ ಮಾಡಿ ಲಾಠಿ ಚಾರ್ಚ್, ನಿಷೇಧಾಜ್ಞೆ ಜಾರಿಯಾಗಲು ಚೈತ್ರ ಕುಂದಾಪುರವೇ ಮೂಲ ಕಾರಣ. ಇಂತವರಿಂದ ಕರಾವಳಿ ಜಿಲ್ಲೆಯಲ್ಲಿ ಶಾಂತಿ ಕದಡುತ್ತಿದ್ದು, ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಪೋಲಿಸ್ ಇಲಾಖೆ ಇಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಚೈತ್ರ ಕುಂದಾಪುರ ನೀಡುವ ಪ್ರಚೋದನಕಾರಿ ಹೇಳಿಕೆಗೆ ಕಡಿವಾಣ ಹಾಕಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.