'ಉಪಚುನಾವಣೆ ಮುಗಿದ ತಕ್ಷಣವೇ ಮರಳು ಸಮಸ್ಯೆಗೆ ಪರಿಹಾರ'
ಉಡುಪಿ, ಅ.25: ಉಡುಪಿ ಜಿಲ್ಲಾ ಮರಳು ಹೋರಾಟ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮರಳುಗಾರಿಕೆ ಪ್ರಾರಂಭಿ ಸುವಂತೆ ಹಮ್ಮಿಕೊಳ್ಳಲಾದ ಅನಿಧಿಷ್ಟಾವಧಿ ಅಹೋರಾತ್ರಿ ಧರಣಿಯ ಸ್ಥಳಕ್ಕೆ ಸರಕಾರದ ಪ್ರತಿನಿಧಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಬೋಜೇ ಗೌಡ, ಸಮಸ್ಯೆಯನ್ನು ಉಪಚುನಾವಣೆ ಮುಗಿದ ಎರಡು ದಿನಗಳ ಬಗಹರಿ ಸುವುದಾಗಿ ಭರವಸೆ ನೀಡಿ, ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು.
ಈ ಸಂಬಂಧ ಮುಖ್ಯಮಂತ್ರಿಗಳು ಉಡುಪಿ ಹಾಗೂ ಬೆಂಗಳೂರಿನಲ್ಲಿ ಒಟ್ಟು ಎರಡು ಬಾರಿ ಅಧಿಕೃತ ಸಭೆಗಳನ್ನು ನಡೆಸಿದ್ದಾರೆ. ಮರಳು ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಖುದ್ಧಾಗಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಸಮಸ್ಯೆ ಬಗೆಹರಿಸುವ ವಿವೇಚನಶಕ್ತಿ ಇಲ್ಲದ ಅಧಿಕಾರಿಗಳಿಗೆ ಇಲ್ಲ. ಇಂತಹ ಅಧಿಕಾರಿಗಳಿಗೆ ಲಕ್ಷಾಂತರ ಜನರಿಗೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೇ ಕಾರಣ. ಈ ಅಧಿಕಾರಿಗಳಿಂದ ಏನು ಕೆಲಸ ಆಗಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ನ.6ರವರೆಗೆ ಈ ಅಧಿ ಕಾರಿಗಳನ್ನು ಏನು ಮಾಡಲು ಆಗುವುದಿಲ್ಲ. ಚುನಾವಣಾ ಮುಗಿದ ಎರಡೇ ದಿನಗಳಲ್ಲಿ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮರಳಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳಿಗೆ ಅರಿವು ಇದೆ. ಈ ಸಮಸ್ಯೆಯನ್ನು ಒಳ್ಳೆಯ ಅಧಿಕಾರಿಗಳ ಮೂಲಕ ಬಗೆಹರಿಸಲಾಗುವುದು. ಧರಣಿ ನಡೆಸುವ ಮೂಲಕ ಸಾಂಕೇತವಾಗಿ ಸರಕಾರದ ಗಮನ ಸೆಳೆದಿದ್ದೀರಿ. ಹಾಗಾಗಿ ಇದನ್ನು ಇಲ್ಲಿಗೆ ಕೈಬಿಡಬೇಕು. ಮುಖ್ಯಮಂತ್ರಿ ಮೇಲೆ ವಿಶ್ವಾಸ ಇಡಬೇಕು. ಚುನಾವಣೆ ನೀತಿ ಸಂಹಿತೆಯ ಬಳಿಕ ಸಮಸ್ಯೆಯನ್ನು ಬಗೆಹರಿಸಲಾಗುವುದು. ಆ ಬಳಿಕ ಕೂಡ ಸಮಸ್ಯೆ ಬಗೆಹರಿಯದಿದ್ದರೆ ನಾವು ಕೂಡ ನಿಮ್ಮ ಜೊತೆ ಬಂದು ಧರಣಿ ಕುಳಿತುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ ಮೊದಲಾದವರು ಉಪಸ್ಥಿತರಿದ್ದರು.