ಪ್ರತಿಪಕ್ಷ ನಾಯಕರ ನಿವಾಸಗಳಿಗೆ ಸ್ಫೋಟಕಗಳ ರವಾನೆ: ಒಗ್ಗಟ್ಟಿನಿಂದಿರಲು ಟ್ರಂಪ್ ಕರೆ
ವಾಶಿಂಗ್ಟನ್, ಅ. 25: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕಟು ಟೀಕಾಕಾರರೂ ಹಾಗೂ ಅವರ ವಾಗ್ದಾಳಿಯ ಮಹತ್ವದ ಗುರಿಗಳೂ ಆಗಿದ್ದ ಹಲವು ಪ್ರಮುಖ ರಾಜಕೀಯ ನಾಯಕರ ಮನೆಗಳು ಮತ್ತು ಕಚೇರಿಗಳಿಗೆ ಕಳುಹಿಸಲಾಗಿದ್ದ ಸ್ಫೋಟಕಗಳನ್ನು ಒಳಗೊಂಡ ಶಂಕಿತ ಪೊಟ್ಟಣಗಳ ಬಗ್ಗೆ ತನಿಖೆ ಜಾರಿಯಲ್ಲಿರುವಂತೆಯೇ, ಅಧ್ಯಕ್ಷರು ಬುಧವಾರ ಏಕತೆಗಾಗಿ ಕರೆ ನೀಡಿದ್ದಾರೆ.
ಸ್ಫೋಟಕಗಳನ್ನು ಒಳಗೊಂಡ ಪೊಟ್ಟಣಗಳನ್ನು ಸ್ವೀಕರಿಸಿದವರ ಪಟ್ಟಿ ಬುಧವಾರ ಸಂಜೆಯ ವೇಳೆಗೆ ಆರಕ್ಕೇರಿದೆ. ಅವರೆಂದರೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ವಿದೇಶ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಮಾಜಿ ಸಿಐಎ ನಿರ್ದೇಶಕ ಜಾನ್ ಬ್ರೆನನ್, ಮಾಜಿ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್, ಡೆಮಾಕ್ರಟಿಕ್ ಸಂಸದ ಮ್ಯಾಕ್ಸಿನ್ ವಾಟರ್ಸ್ ಮತ್ತು ಡೆಮಾಕ್ರಟಿಕ್ ದಾನಿ ಜಾರ್ಜ್ ಸೊರೊಸ್.
ಅವರೆಲ್ಲರಿಗೂ ಕಳುಹಿಸಲಾದ ಪೊಟ್ಟಣಗಳು ಒಂದೇ ರೀತಿಯಾಗಿವೆ ಹಾಗೂ ಹಿಂದಕ್ಕೆ ಕಳುಹಿಸಬೇಕಾದ ವಿಳಾಸವೂ ಒಂದೇ ಆಗಿದೆ- ‘ಡೆಬ್ಬೀ ವಾಸರ್‌ಮನ್ ಶುಲ್ಝ್’. ಶುಲ್ಝ್ 2016ರಲ್ಲಿ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥರಾಗಿದ್ದರು.
ನವೆಂಬರ್ ತಿಂಗಳಿನಲ್ಲಿ ಅಮೆರಿಕದಲ್ಲಿ ಮಧ್ಯಂತ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಸಂಶಯಾಸ್ಪದ ಪೊಟ್ಟಣಗಳು ದೇಶದ ರಾಜಕೀಯ ವಾತಾವರಣವನ್ನು ಬಿಸಿಯಾಗಿಸಿವೆ.
‘‘ಈ ಸಮಯದಲ್ಲಿ, ನಾವು ಒಗ್ಗಟ್ಟಾಗಬೇಕು’’ ಎಂದು ಟ್ರಂಪ್ ಹೇಳಿದರು.
‘‘ನಾವು ಒಗ್ಗೂಡಬೇಕಾಗಿದೆ ಹಾಗೂ ಯಾವುದೇ ರೀತಿಯ ರಾಜಕೀಯ ಹಿಂಸಾಚಾರದ ಕೃತ್ಯಗಳು ಹಾಗೂ ಬೆದರಿಕೆಗೆ ಅಮೆರಿಕದಲ್ಲಿ ಸ್ಥಾನವಿಲ್ಲ ಎಂಬ ಪ್ರಬಲ ಹಾಗೂ ನಿಖರ ಸಂದೇಶವನ್ನು ನೀಡಬೇಕಾಗಿದೆ’’ ಎಂದರು.
ಪೊಟ್ಟಣಗಳಲ್ಲಿ ಪೈಪ್ ಬಾಂಬ್‌ಗಳು?
ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಫ್‌ಬಿಐ, ಪೊಟ್ಟಣಗಳ ಒಳಗಿದ್ದ ಸಲಕರಣೆಗಳನ್ನು ‘ಸಂಭಾವ್ಯ ವಿನಾಶಕಾರಿ’ ಎಂದಷ್ಟೇ ವಿವರಿಸಿದೆ. ಆದರೆ, ಪ್ರತಿಯೊಂದರಲ್ಲಿಯೂ ಮನೆಯಲ್ಲಿ ನಿರ್ಮಿಸಬಹುದಾದ ಪೈಪ್ ಬಾಂಬ್‌ಗಳಿದ್ದವು ಎಂದು ಇತರ ಕಾನೂನು ಅನುಷ್ಠಾನ ಸಂಸ್ಥೆಗಳ ಮೂಲಗಳು ಹೇಳಿವೆ.
ಈ ಸ್ಫೋಟಕಗಳಿಂದ ಜೀವ ಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ಆದರೆ, ಅಮೆರಿಕದ ಈಗಾಗಲೇ ರಂಗೇರಿರುವ ಚುನಾವಣಾ ಕಣವನ್ನು ಈ ಪ್ರಕರಣ ಇನ್ನಷ್ಟು ಬಿಸಿ ಮಾಡಿದೆ.
ಶ್ವೇತಭವನ, ಸಿಎನ್‌ಎನ್ ನಡುವೆ ಮಾತಿನ ಚಕಮಕಿ
ಅಮೆರಿಕದ ಟಿವಿ ವಾಹಿನಿ ಸಿಎನ್‌ಎನ್ ಕಚೇರಿಗೆ ಕಳುಹಿಸಲಾದ ಪೊಟ್ಟಣವೊಂದರಲ್ಲಿ ಸ್ಫೋಟಕ ಸಾಧನವೊಂದು ಪತ್ತೆಯಾದ ಬಳಿಕ ಬುಧವಾರ ಸಿಎನ್‌ಎನ್ ಮತ್ತು ಅಮೆರಿಕ ಅಧ್ಯಕ್ಷರ ಕಚೇರಿ ಮತ್ತು ನಿವಾಸ ಶ್ವೇತಭವನದ ನಡುವೆ ಮಾತಿನ ಸಮರ ಏರ್ಪಟ್ಟಿದೆ.
‘‘ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರು ಮಾಧ್ಯಮಗಳ ಮೇಲೆ ನಡೆಸುತ್ತಿರುವ ನಿರಂತರ ದಾಳಿಗಳ ಗಂಭೀರತೆಯನ್ನು ಅರಿಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ’’ ಎಂದು ಸಿಎನ್‌ಎನ್ ಮುಖ್ಯಸ್ಥ ಜೆಫ್ ಝುಕರ್ ಹೇಳಿದ್ದಾರೆ.
ಸಿಎನ್‌ಎನ್ ಕಚೇರಿಯಲ್ಲಿ ಬುಧವಾರ ಸ್ಫೋಟಕ ಪತ್ತೆಯಾದ ಬಳಿಕ 5 ಗಂಟೆಗಳ ಕಾಲ ಕಚೇರಿಯನ್ನು ತೆರವುಗೊಳಿಸಲಾಗಿತ್ತು. ಶೋಧ ಕಾರ್ಯ ಮುಗಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
‘‘ತಮ್ಮ ಮಾತುಗಳು ಪರಿಣಾಮ ಬೀರುತ್ತವೆ ಎನ್ನುವುದನ್ನು ಅಧ್ಯಕ್ಷರು, ಅದರಲ್ಲೂ ಮುಖ್ಯವಾಗಿ ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಅರ್ಥಮಾಡಿಕೊಳ್ಳಬೇಕು. ಈವರೆಗೆ ಅವರು ಇದನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ’’ ಎಂದರು.
ಇದಕ್ಕೆ ತಿರುಗೇಟು ನೀಡಿರುವ ಸ್ಯಾಂಡರ್ಸ್, ‘‘ನಾವು ಅಮೆರಿಕನ್ನರು ಒಂದಾಗಬೇಕು ಹಾಗೂ ಹಿಂಸೆಗೆ ಅಮೆರಿಕದ ಸಮಾಜದಲ್ಲಿ ಸ್ಥಾನವಿಲ್ಲ ಎಂಬ ಪ್ರಬಲ ಸಂದೇಶವನ್ನು ನೀಡಬೇಕು ಎಂಬುದಾಗಿ ಕರೆ ನೀಡಿದ್ದಾರೆ. ಆದರೆ, ನೀವು ಜನರನ್ನು ವಿಭಾಗಿಸಲು ಪ್ರಯತ್ನಿಸುತ್ತಿದ್ದೀರಿ’’ ಎಂದು ಹೇಳಿದ್ದಾರೆ.
ನಟನ ರೆಸ್ಟೋರೆಂಟ್‌ನಲ್ಲಿ ಸಂಶಯಾಸ್ಪದ ಪೊಟ್ಟಣ
ಅಮೆರಿಕದ ಮ್ಯಾನ್‌ಹಟನ್‌ನ ಟ್ರೈಬೆಕ ಉಪನಗರದಲ್ಲಿರುವ ನಟ ರಾಬರ್ಟ್ ಡಿ ನೀರೊ ಅವರ ರೆಸ್ಟೋರೆಂಟ್‌ಗೆ ಗುರುವಾರ ‘ಶಂಕಿತ ಪೊಟ್ಟಣ’ವೊಂದು ಆಗಮಿಸಿದೆ ಎಂದು ಎನ್‌ಬಿಸಿ ವರದಿ ಮಾಡಿದೆ.
ನ್ಯೂಯಾರ್ಕ್ ಪೊಲೀಸ್ ಇಲಾಖೆ ಪೊಟ್ಟಣದ ತನಿಖೆಯನ್ನು ನಡೆಸುತ್ತಿದೆ. ಈ ಪೊಟ್ಟಣವು ಸಿಎನ್‌ಎನ್ ಕಚೇರಿ ಹಾಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಹಿರಿಯ ಡೆಮಾಕ್ರಟಿಕ್ ಪಕ್ಷದ ನಾಯಕರಿಗೆ ಬುಧವಾರ ಕಳುಹಿಸಲಾದ ಪೊಟ್ಟಣಗಳನ್ನು ಹೋಲುತ್ತದೆ.
ಸಿಎನ್‌ಎನ್ ಮತ್ತು ಇತರರಿಗೆ ಕಳುಹಿಸಲಾದ ಸಂಶಯಾಸ್ಪದ ಪೊಟ್ಟಣಗಳನ್ನು ಸುದ್ದಿ ಚಾನೆಲ್‌ಗಳಲ್ಲಿ ತೋರಿಸಲಾಗಿತ್ತು. ಅವುಗಳನ್ನು ನೋಡಿದ್ದ ರೆಸ್ಟೋರೆಂಟ್‌ನ ಉದ್ಯೋಗಿಯೊಬ್ಬರು, ರೆಸ್ಟೋರೆಂಟ್‌ಗೆ ಬಂದ ಪೊಟ್ಟಣವು ಅವುಗಳನ್ನು ಹೋಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳವು ಪೊಟ್ಟಣವನ್ನು ಕಟ್ಟಡದಿಂದ ಹೊರಗೆ ಒಯ್ಯಿತು. ನ್ಯೂಯಾರ್ಕ್‌ನಲ್ಲಿ ಜೂನ್‌ನಲ್ಲಿ ನಡೆದ ಟೋನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಷಣ ಮಾಡಿದ್ದ ಡಿ ನೀರೊ, ಟ್ರಂಪ್ ಆಡಳಿತವನ್ನು ಟೀಕಿಸಿರುವುದನ್ನು ಸ್ಮರಿಸಬಹುದಾಗಿದೆ.