ಸುಬ್ರಹ್ಮಣ್ಯದಲ್ಲಿ ಸಂಘ ಪರಿವಾರ ಮುಖಂಡರ ನಡುವೆ ಘರ್ಷಣೆ ಪ್ರಕರಣ: ಚೈತ್ರಾ ಕುಂದಾಪುರ ಸಹಿತ 6 ಮಂದಿಗೆ ನ್ಯಾಯಾಂಗ ಬಂಧನ

Update: 2018-10-25 15:26 GMT

ಸುಳ್ಯ, ಅ. 25: ಸುಬ್ರಹ್ಮಣ್ಯದಲ್ಲಿ ಸಂಘ ಪರಿವಾರ ಮುಖಂಡರ ನಡುವೆ ಬುಧವಾರ ನಡೆದ ಘರ್ಷಣೆಗೆ ಸಂಬಂಧಿಸಿ ಚೈತ್ರಾ ಕುಂದಾಪುರ ಸಹಿತ 6 ಮಂದಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ತಂಡದ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಹಾಗು ತಂಡಕ್ಕೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಹಾಗೂ ಆಕೆಯ ಸಹಚರರನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಗುರುವಾರ ಸಂಜೆ ಹಾಜರುಪಡಿಸಿದರು. ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಚೈತ್ರಾ ಕುಂದಾಪುರ, ಸುದಿನ, ವಿನಯ, ಮಣಿಕಂಠ, ನಿಖಿಲ್, ಹರೀಶ್, ಖಾರ್ವಿ ಹಾಗೂ ಹರೀಶ್ ನಾಯಕ್ ವಿರುದ್ಧ ಹಲ್ಲೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದ ಬಳಕೆ ಹಿನ್ನಲೆಯಲ್ಲಿ ಕೇಸು ದಾಖಲಿಸಿ ನ್ಯಾಯಾಂಗ ಬಂಧನ ವಿಧಿಸಿದೆ.

ಘಟನೆಯ ಸಂಬಂಧ ಗುರುಪ್ರಸಾದ್ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು, ಚೈತ್ರಾ ಕುಂದಾಪುರ ಹಾಗೂ ತಂಡ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ದೂರಿದ್ದಾರೆ. ಘಟನೆ ಸಂಬಂಧ ಚೈತ್ರಾ ಕುಂದಾಪುರ ಕೂಡಾ ತನ್ನ ಮೇಲೆ ಅಸಭ್ಯವಾಗಿ ವರ್ತಿಸಿ ತಳ್ಳಾಟ ನಡೆಸಿ, ಸರವೊಂದನ್ನು ಕಿತ್ತುಕೊಂಡಿರುವುದಾಗಿ ಪ್ರತಿದೂರು ನೀಡಿದ್ದಾಳೆ.

ಚೈತ್ರಾ ಕುಂದಾಪುರ ಬೆಂಬಲಿಗರಿಂದ ಹಲ್ಲೆಗೊಳಗಾಗಿ ಗಾಯಗೊಂಡ ಗುರುಪ್ರಸಾದ್ ಸುಳ್ಯದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಆತನ ವಿರುದ್ಧ ಕಳ್ಳತನ ಹಾಗೂ ಮಾನಭಂಗ ಯತ್ನ ಸಂಬಂಧ ಕೇಸು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News