×
Ad

​ಮಿ ಟೂ; ಹೆಣ್ಣು ಮುಕ್ತವಾಗಿ ಬಂದಾಗ ಬೆಂಬಲ ನೀಡಿ: ಜಯಮಾಲ

Update: 2018-10-25 20:52 IST

ನಾಗೂರು (ಬೈಂದೂರು), ಅ.25: ಮಿ ಟೂ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ. ಹೆಣ್ಣು ಮುಕ್ತವಾಗಿ ಬಂದಾಗ ಬೆಂಬಲ ನೀಡಬೇಕು. ಆದರೆ ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡಸನ್ನು ಸುಮ್ಮನೆ ದೂಷಿಸುವುದು ಸರಿಯಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಚಿತ್ರನಟಿ ಡಾ. ಜಯಮಾಲಾ ಹೇಳಿದ್ದಾರೆ.

ನಾಗೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಜಯಮಾಲ, ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಹೆಣ್ಣಿನ ಮೇಲಾಗುವ ದೌರ್ಜನ್ಯ, ಲೈಂಗಿಕ ಕಿರುಕುಳವನ್ನು ಎದುರಿಸಲು ಮಿ ಟೂ ಆಕೆಗೆ ಬಲ ತಂದು ಕೊಟ್ಟಿದೆ. ಮಿ ಟೂ ಈಗ ತಾನೇ ಹುಟ್ಟಿಕೊಂಡ ಹೊಸ ಅಭಿಯಾನ. ಇದಕ್ಕೆ ಕಾನೂನಿನ ನೆಲೆ ಸಿಗುವವರೆಗೂ ಇದರಿಂದ ಹೆಣ್ಣಿಗೆ ಎಷ್ಟು ನ್ಯಾಯ ಸಿಗುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದು ಜಯಮಾಲಾ ಅಭಿಪ್ರಾಯಪಟ್ಟರು.

ಮಿ ಟೂ ಅಭಿಯಾನ ಹೆಣ್ಣಿಗೆ ರಕ್ಷಣೆ ನೀಡುವ ಅಭಿಯಾನವಾಗಿದೆ. ಇದು ಹೆಣ್ಣಿಗೆ ಬಲವನ್ನು ತಂದುಕೊಟ್ಟಿದೆ. ಹೆಣ್ಣು ದೌರ್ಜನ್ಯದಿಂದ ಮಾನಸಿಕವಾಗಿ ಚಿತ್ರಹಿಂಸೆ ಪಡುವ ಬದಲು, ಅದನ್ನು ಮುಕ್ತವಾಗಿ ಹೇಳಿಕೊಳ್ಳುವ ಅವಕಾಶ ವನ್ನು, ವೇದಿಕೆಯನ್ನು ಇದು ನೀಡಿದೆ ಎಂದು ಅವರು ಹೇಳಿದರು.

ತಾವು ಅಭಿನಯಿಸುವಾಗ ನಿರ್ದೇಶಕರು ಅಥವಾ ನಟರಿಂದ ಇಂಥ ಅನುಭವವಾಗಿತ್ತೇ ಎಂದು ಪ್ರಶ್ನಿಸಿದಾಗ, ಮಾತನ್ನು ಅರ್ಧದಲ್ಲೇ ತುಂಡರಿಸಿದ ಜಯಮಾಲ, ‘ನಾವು ಸುವರ್ಣ ಕಾಲದಲ್ಲಿದ್ವಿ. ರಾಜ್‌ಕುಮಾರ್‌ರಂಥ ಮಹಾನ್ ನಟರೊಂದಿಗೆ ಕೆಲಸ ಮಾಡಿದ್ದೀವಿ. ನಾವು ಇಂಥ ದಿನಗಳನ್ನೇ ನೋಡಿಲ್ಲ. ನಾನು, ನನ್ನ 13ನೇ ವರ್ಷದಿಂದ ಈವರೆಗೆ 75 ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀನಿ. ಐದು ಸಿನಿಮಾಗಳನ್ನು ನಿರ್ಮಿಸಿದ್ದೀನಿ. ಇದು ನನ್ನ 46ನೇ ವರ್ಷದ ಚಿತ್ರರಂಗ ಯಾತ್ರೆ. ಬದುಕಿನಲ್ಲಿ ಇಂಥ ಒಂದು ದಿನ ಯಾವತ್ತೂ ನನಗೆ ಬಂದಿಲ್ಲ. ಒಂದೇ ಒಂದು ಕಹಿ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲ. ನನ್ನ ಕಾಲ ಚಿತ್ರರಂಗದ ಸುವರ್ಣ ಯುಗ’ ಎಂದರು.

ಈಗಿನ ಚಿತ್ರರಂಗದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಸರಳ ಸಜ್ಜನ ಹುಡುಗ. ಸರ್ಜಾ ತಂದೆಯ ಜೊತೆಯೂ ನಾನು ಅಭಿನಯಿಸಿದ್ದೆ. ಇದೀಗ ಈ ವಿಷಯದ ಬಗ್ಗೆ ವಾಣಿಜ್ಯ ಮಂಡಳಿ ತೀರ್ಮಾನಕ್ಕೆ ಬರಲಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಸಭೆ ಕರೆದಿದ್ದಾರೆ ಎಂದರು.

ನಾನು ಮಂಡಳಿ ಅಧ್ಯಕ್ಷೆಯಾಗಿದ್ದಾಗ ವಿಶಾಖ ಜಡ್ಜ್ ಮೆಂಟ್‌ನ ಘಟಕವನ್ನು ಎಲ್ಲಾ ಕಡೆ ತೆರೆಯುವಂತೆ ಒತ್ತಾಯಿಸಿದ್ದೆ. ಇದರಿಂದ ಇಂಥ ಘಟನೆಗಳು ನಡೆದರೆ, ಹೆಣ್ಣಿಗೆ ತನ್ನ ನೋವನ್ನು ಹೇಳಿಕೊಳ್ಳಲು ತಕ್ಷಣವೇ ವೇದಿಕೆ ಸಿಕ್ಕಿ, ಅದು ಶೀಘ್ರವೇ ಇತ್ಯರ್ಥಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಘಟನೆಯಿಂದ ಕನ್ನಡ ಚಿತ್ರರಂಗ ಇಬ್ಭಾಗವಾಗುವ ಸಾದ್ಯತೆ ಇದೆಯೇ ಎಂದು ಪ್ರಶ್ನಿಸಿದಾಗ, ಮೀಟೂ ಚಿತ್ರರಂಗವನ್ನು ಇಬ್ಬಾಗ ಮಾಡಲು ಸಾಧ್ಯವಿಲ್ಲ. ಸ್ಯಾಂಡಲ್‌ವುಡ್‌ಗೆ 85 ವರ್ಷಗಳ ಇತಿಹಾಸ ಇದೆ. ಈ ಘಟನೆಯಿಂದ ಚಿತ್ರರಂಗಕ್ಕೆ ಏನೂ ಆಗುವುದಿಲ್ಲ. ನಾಳೆಯ ದಿನ ಈಗ ಪರಸ್ಪರ ದೂರಿ ಕೊಂಡವರೂ ಒಟ್ಟಿಗೆ ಅಭಿನಯಿಸಿದರೂ ಆಶ್ಚರ್ಯವಿಲ್ಲ ಎಂದು ಜಯಮಾಲ ನುಡಿದರು.

ಮರಳು ಕಾಲಾವಕಾಶ ಬೇಕು: ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಡೆದಿರುವ ಪ್ರತಿಭಟನೆಯ ಕುರಿತಂತೆ ಪ್ರಶ್ನಿಸಿದಾಗ, ಮರಳು ತೆಗೆಯಲು ಪರವಾನಿಗೆಯನ್ನು ಎಲ್ಲರಿಗೂ ಒಟ್ಟಿಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಸಂಬಂಧಿತ ರನ್ನು ಕರೆದು ಮಾತನಾಡಿ ಅವರನ್ನು ಒಪ್ಪಿಸಿದ್ದಾರೆ. ಅವರು ಕಾಲಾವಕಾಶ ನೀಡಿದ್ದಾರೆ ಎಂದರು.

ಈ ಬಗ್ಗೆ ಇರುವ ಕಾನೂನಾತ್ಮಕ ತೊಂದರೆಯ ಬಗ್ಗೆಯೂ ನಾವು ಅರಿತುಕೊಳ್ಳಬೇಕು. ಜನರಿಗೆ ಮರಳು ಸಿಗುವುದು ಹಾಗೂ ಕೊಡುವುದು ನಮ್ಮ ಆದ್ಯ ಕರ್ತವ್ಯ. ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಸಹಕರಿಸಬೇಕಾಗುತ್ತದೆ. ಇದು ಒಬ್ಬರಿಂದ ಇತ್ಯರ್ಥಗೊಳ್ಳುವ ಸಮಸ್ಯೆ ಅಲ್ಲ. ಸಿಆರ್‌ಝಡ್‌ನಲ್ಲಿ 68 ಜನಕ್ಕೆ ಪರವಾನಿಗೆ ನೀಡುವುದು ಸಾಲುವುದಿಲ್ಲ ಅಂತಾರೆ. ಪ್ರತಿಯೊಬ್ಬರಿಗೂ ಕೊಡಲು ಸಮಯ ಬೇಕಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕಾಗುತ್ತದೆ. ಅವರೇ ಟೆಂಡರ್ ಕರೆಯುವವರೆಗೂ ಕಾಯುತ್ತೇವೆ ಎನ್ನುತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News