ಕುದ್ರೋಳಿಯಲ್ಲಿ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನೆ
ಮಂಗಳೂರು, ಅ. 25: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಈ ಬಾರಿಯ ವರ್ಷಾವಧಿ ಉತ್ಸವ ನಡೆಯುವ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ನೂತನ ಧ್ವಜ ಸ್ತಂಭವನ್ನು ಪ್ರತಿಷ್ಠಾಪಿಸಲಾಗುವುದು ಎಂದು ಮಾಜಿ ವಿತ್ತ ಸಚಿವ ಹಾಗೂ ಶ್ರೀಕ್ಷೇತ್ರ ಕುದ್ರೋಳಿಯ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನೂತನ ಕೊಡಿಮರ ಸ್ಥಾಪನೆ ದೈವ ಸಂಕಲಪ್ಪ:-
ಸದ್ರಿ ಧ್ವಜ ಸ್ತಂಭ (ಕೊಡಿಮರವನ್ನು) ಬದಲಾಯಿಸ ಬೇಕು ಎನ್ನುವುದು ನನಗೆ ದೈವ ಸಂಕಲ್ಪದಿಂದ ಬಂದಿರುವ ಪ್ರೇರಣೆಯಾಗಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ. 105 ವರ್ಷಗಳ ಹಿಂದಿನ ದೇವಸ್ಥಾನದ ಧ್ವಜ ಸ್ತಂಭ(ಕೊಡಿಮರ)ವನ್ನು 1991ರಲ್ಲಿ ದೇವಸ್ಥಾನದ ನವೀಕರಣದ ಸಂದರ್ಭದಲ್ಲಿ ಬದಲಾಯಿಸಿರುವುದಿಲ್ಲ. ತುಳು ನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಹುಟ್ಟೂರಾದ ಪಡುಮಲೆಯಿಂದ ತಂದಿರುವ (ಕೊಡಿ)ಮರವನ್ನು (ಸಾಗುವಾನಿ)ಇಂದು ಧಾರ್ಮಿಕ ವಿಧಿ ವಿಧಾನಗಳಿಂದ ಪೂಜಿಸಿದ ಜನಾರ್ದನ ಪೂಜಾರಿ ಆರತಿ ಬೆಳಗಿ ಬಾವುಕರಾಗಿ ವಂದಿಸಿದರು.
ಈ ಬಾರಿಯ ದೇವಸ್ಥಾನದ ಉತ್ಸವ ಶ್ರೀಕ್ಷೇತ್ರದಲ್ಲಿ ಫೆ.27ರಿಂದ ಮಾರ್ಚ್ 2019ರವರೆಗೆ ನಡೆಯಲಿದೆ. ಜಾತಿ, ಮತ ಭೇದವಿಲ್ಲದೆ ಈ ಉತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ನೂತನ ಧ್ವಜ ಸ್ತಂಭವನ್ನು (ಕೊಡಿ ಮರ) ಸ್ಥಾಪಿಸಲಾಗುವುದು ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕುದ್ರೋಳಿದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಮಾಧವ ಸುವರ್ಣ,ಕ್ಷೇತ್ರದ ಅಬಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಡಾ.ಬಿ.ಜೆ.ಸುವರ್ಣ, ಡಾ.ಅನಸೂಯ ಬಿ.ಟಿ, ಹರಿಶ್ಚಂದ್ರ, ಲೀಲಾಕ್ಷ ಕರ್ಕೇರಾ, ಲೋಹಿತಾಕ್ಷ, ಜಯ ವಿಕ್ರಮ, ಡಿ.ಡಿ.ಕಟ್ಟೆಮಾರ್, ದೇವೇಂದ್ರ ಪೂಜಾರಿ, ಶೇಖರ ಪೂಜಾರಿ, ಖಜಾಂಜಿ ಪದ್ಮ ರಾಜ್ ಆರ್ ಮೊದಲಾದವರು ಉಪಸ್ಥಿತರಿದ್ದರು.