×
Ad

ಪುತ್ತೂರು : ಚಿತ್ರಮಂದಿತಕ್ಕೆ ನುಗ್ಗಿ ದಾಂಧಲೆ ನಡೆಸಿದ ಇಬ್ಬರ ಬಂಧನ

Update: 2018-10-25 21:24 IST

ಪುತ್ತೂರು, ಅ. 25: ಇಲ್ಲಿನ ಅರುಣಾ ಚಿತ್ರಮಂದಿರದಲ್ಲಿ 'ದಿ ವಿಲನ್' ಚಿತ್ರ ಪ್ರದರ್ಶನದ ವೇಳೆ ತಂಡವೊಂದು ಚಿತ್ರಮಂದಿರಕ್ಕೆ ನುಗ್ಗಿ ದಾಂಧಲೆ ನಡೆಸಿ, ಚಿತ್ರ ಮಂದಿರಕ್ಕೆ ಹಾನಿಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಇಬ್ಬರನ್ನು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರಿನ ಪರ್ಲಡ್ಕ ನಿವಾಸಿ ರಾಕೇಶ್ ಕುಮಾರ್ (40) ಮತ್ತು ಪುತ್ತೂರು ಪಾಂಗಳಾಯಿ ನಿವಾಸಿ ಪ್ರಶಾಂತ್ ಮಣಿಯಾಣಿ (34) ಬಂಧಿತ ಆರೋಪಿಗಳು. 

ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿ ಹಿಂಸಾತ್ಮಕ ರೀತಿಯಲ್ಲಿ ಎಮ್ಮೆ ಕರುವಿನ ಬಲಿ ಮಾಡಿದ ಹಿನ್ನೆಲೆಯಲ್ಲಿ ಈ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕೆಂದು ತಂಡವೊಂದು ಮಂಗಳವಾರ ರಾತ್ರಿ ಚಿತ್ರಪ್ರದರ್ಶನದ ವೇಳೆ ಚಿತ್ರಮಂದಿರಕ್ಕೆ ನುಗ್ಗಿ ಗಲಾಟೆ-ದಾಂಧಲೆ ನಡೆಸಿ, ಚಿತ್ರಮಂದಿರಕ್ಕೆ ಸೋಡಾ ಬಾಟಲಿ ಎಸೆದು, ಚಿತ್ರ ಪ್ರದರ್ಶನ ಪ್ರಚಾರದ ಬ್ಯಾನರ್ ಹರಿದುಹಾಕಿ ಹಾನಿಯುಂಟು ಮಾಡಿರುವುದಾಗಿ ಆರೋಪಿಸಿ ಚಿತ್ರಮಂದಿರದ ನಿರ್ವಾಹಕ ನವೀನ್  ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯಿಂದಾಗಿ 5ಸಾವಿರ ರೂ. ನಷ್ಟವಾಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು. 

ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು ಚಿತ್ರ ಮಂದಿರದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿ, ಇದೀಗ ಇಬ್ಬರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News