×
Ad

ಮಹಿಳೆ ಮೇಲೆ ದೌರ್ಜನ್ಯ ಆರೋಪ; ಬಜ್ಪೆ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಕೇಸು ದಾಖಲು

Update: 2018-10-25 22:04 IST

ಮಂಗಳೂರು, ಅ.25: ಪತಿಯ ಮೇಲಿನ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಠಾಣೆಗೆ ಕರೆದೊಯ್ದ ಅವಾಚ್ಯವಾಗಿ ನಿಂದಿಸಿ, ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಜ್ಪೆ ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ವಿರುದ್ಧ ಗುರುವಾರ ಕೇಸು ದಾಖಲಾಗಿದೆ.

‘ಬಜ್ಪೆ ಪೊಲೀಸರು ಅ.23ರಂದು ಸಂಜೆ 4:15ಕ್ಕೆ ತನ್ನನ್ನು ಠಾಣೆಗೆ ಕರೆಸಿ, ತನ್ನ ಪತಿಯ ನಂಬರ್‌ನ್ನು ಕೇಳಿದ್ದು, ನನ್ನ ಬಳಿ ಪತಿಯ ನಂಬರ್ ಇಲ್ಲ, ಸಂಪರ್ಕವೂ ಇಲ್ಲ ಎಂದು ಉತ್ತರಿಸಿದೆ. ಇನ್‌ಸ್ಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಊಟದ ತಟ್ಟೆಯಿಂದ ಹಲ್ಲೆ ನಡೆಸಿ, ದೌರ್ಜನ್ಯ ನಡೆಸಿದ್ದಾರೆ’ ಎಂದು ದೌರ್ಜನ್ಯಕ್ಕೊಳಗಾದವರು ಎನ್ನಲಾದ ಗಂಜಿಮಠ ನಿವಾಸಿ ಸಲೀಕ ದೂರಿನಲ್ಲಿ ತಿಳಿಸಿದ್ದಾರೆ.

ಬಜ್ಪೆ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ನಿಂದನೆ (504), ಹಲ್ಲೆ (323), ಆಯುಧದಿಂದ ಹಲ್ಲೆ (324) ನಡೆಸಿದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪರ ಪ್ರತಿಭಟನೆ: ಪೊಲೀಸ್ ಇನ್‌ಸ್ಪೆಕ್ಟರ್

ಮಹಿಳೆ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಸಂಘಟನೆಯೊಂದು ಠಾಣೆಯ ಎದುರು ಪ್ರತಿಭಟನೆ ನಡೆಸಿತು. ಆದರೆ ಆ ಮಹಿಳೆಯ ಪತಿ ಆರೋಪಿ ವಿರುದ್ಧದ ಪೊಕ್ಸೊ ಪ್ರಕರಣದಲ್ಲಿ ಯಾವುದೇ ಸಂಘಟನೆಗಳು ಪ್ರತಿಭಟಿಸಲಿಲ್ಲ, ನಡೆಸಿದ್ದರೆ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ದೊರೆಯುತ್ತಿತ್ತು. ಇಂದಿನ ಪ್ರತಿಭಟನೆಯಲ್ಲಿ ಆರೋಪಿಗಳನ್ನು ರಕ್ಷಿಸುವ ಉದ್ದೇಶವಿತ್ತು. ಹೀಗಾದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವುದಕ್ಕೆ ತಡೆಯುಂಟಾಗುತ್ತದೆ ಎಂದು ಬಜ್ಪೆ ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ಅವರು ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News