ಕಟಪಾಡಿ ಗುಂಡು ಹಾರಾಟ ಪ್ರಕರಣ: ನಾಲ್ವರ ಬಂಧನ
ಕಾಪು, ಅ.25: ಕಟಪಾಡಿಯ ಜಾಮೀಯಾ ಮಸೀದಿಯಲ್ಲಿ ನಡೆದ ಗುಂಡು ಹಾರಾಟ ಹಾಗೂ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್(56), ಅವರ ಪುತ್ರ ಅಬ್ದುಲ್ ಹಮೀದ್ (44), ಅಕ್ಬರ್(28), ಸಲೀಂ ಮಲ್ಲಿಕ್(21) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ನಾಲ್ಕು ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ. ರಿವಾಲ್ವರ್ ಹಾಗೂ ಇತರ ಆಯುಧಗಳನ್ನು ಇನ್ನಷ್ಟೆ ವಶಪಡಿಸಿಕೊಳ್ಳಬೇಕಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅ.24ರಂದು ನಡೆದ ಕಟಪಾಡಿಯ ಜಾಮೀಯಾ ಮಸೀದಿಯ ವಿಶೇಷ ಮಹಾಸಭೆಯಲ್ಲಿ ಸದಸ್ಯರ ಆಯ್ಕೆ ಪ್ರಕ್ರಿಯೆ ವಿಚಾರಕ್ಕೆ ಸಂಬಂಧಿಸಿ ಅಕ್ಬರ್ ಮಹಮ್ಮದ್ ಬ್ಯಾರಿ ಎಂಬವರಿಗೆ ಇಮ್ತಿಯಾಝ್, ಅಕ್ಬರ್, ಸಲೀಂ ಮಲ್ಲಿಕ್, ಲತೀಫ್, ಶಫಿ ಇಸ್ಮಾಯಿಲ್, ಅಬ್ದುಲ್ ರಝಾಕ್, ಇಮ್ತಿಯಾಝ್, ಲತೀಫ್ ಸುಭಾಷ ನಗರ, ಮುಹಮ್ಮದ್, ಅಬ್ದುಲ್ ಹಮೀದ್ ಎಂಬವರು ಹಲ್ಲೆ ನಡೆಸಿದ್ದರು ಎಂದು ದೂರಲಾಗಿತ್ತು. ಈ ಸಂದರ್ಭದಲ್ಲಿ ಅಕ್ಬರ್ ರಿವಾಲ್ವರ್‌ನಿಂದ ಗುಂಡು ಹಾರಿಸಿ ಮಹಮ್ಮದ್ ಬ್ಯಾರಿಯನ್ನು ಕೊಲೆ ಮಾಡಲು ಯತ್ನಿಸಿದರೆನ್ನಲಾಗಿದೆ. ಇತರರು ತಡೆದ ಹಿನ್ನೆಲೆಯಲ್ಲಿ ಗುಂಡು ಗಾಳಿಯಲ್ಲಿ ಹಾರಿತೆಂದು ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.