ಉಪ್ಪಿನಂಗಡಿ: ​ಉಣ್ಣಿಕೃಷ್ಣನ್ ಕೊಲೆ ಪ್ರಕರಣದ ರಹಸ್ಯ ಬಯಲು

Update: 2018-10-28 17:25 GMT
ಉಣ್ಣಿಕೃಷ್ಣನ್ - ಅನಾಸ್

ಉಪ್ಪಿನಂಗಡಿ, ಅ. 28: ಕೇರಳದ ಕುಖ್ಯಾತ ಕ್ರಿಮಿನಲ್ ಉಣ್ಣಿಕೃಷ್ಣನ್ ಕೊಲೆ ಪ್ರಕರಣದ ಹಿಂದಿನ ರಹಸ್ಯವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಭೂಗತ ಜಗತ್ತಿನಲ್ಲಿ ತನ್ನನ್ನು ಮೀರಿ ಬೆಳೆಯುತ್ತಿದ್ದಾನೆ ಎಂಬ ಕಾರಣಕ್ಕೆ ಕೇರಳದ ಕುಖ್ಯಾತ ಕ್ರಿಮಿನಲ್ ಅನಾಸ್ ಎಂಬಾತನ ಕುಮ್ಮಕ್ಕಿನಿಂದ ಈ ಹತ್ಯೆ ನಡೆದಿರುವುದಾಗಿ ತಿಳಿದು ಬಂದಿದೆ.

ಕೇರಳದ ಅರೆಕ್ಕಿಪ್ಪಾಡಿ ನಿವಾಸಿ ಉಣ್ಣಿಕೃಷ್ಣನ್ ಎಂಬಾತನನ್ನು ಕಳೆದ ಸೆ.1ರಂದು ಉಪ್ಪಿನಂಗಡಿ ಪರಿಸರದಲ್ಲಿ ಕೊಲೆಗೈದು ಕುಪ್ಪೆಟ್ಟಿ ಎಂಬಲ್ಲಿನ ಸೇತುವೆ ಕೆಳಗಡೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಅನಾಸ್‌ನ ಬಂಧನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಅನಾಸ್‌ನ ಸಹಚರರಾದ ಔರಂಗಝೇಬ್(37), ಮುಹಮ್ಮದ್ ಶನವಾಝ್ (23), ಜೀತು ಸಾಜಿ (23) ಹಾಗೂ ಸುಹೈಲ್ ನಝೀರ್ (22) ಎಂಬವರ ಬಂಧನವಾಗಿದ್ದು, ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ವರದಿಯಾಗಿದೆ.

ಅನಾಸ್‌ನ ಹಿನ್ನೆಲೆ: ಕೇರಳದ ಎರ್ನಾಕುಲಂ ಜಿಲ್ಲೆಯ ಪೆರಂಬೂರು ತಾಲೂಕಿನ ವಂಗೂಲ ಗ್ರಾಮದ ಪುತ್ತನ್ ಪುರಂ ನಿವಾಸಿ ಅನ್ಸಾರ್ ಯಾನೆ ಅನಾಸ್.
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಕೊಚ್ಚಿನ್‌ನಲ್ಲಿ ರೌಡಿ ಆಗಿದ್ದ ಶಾಬರ್ ಎಂಬಾತನ ಗ್ಯಾಂಗ್‌ಗೆ ಸೇರಿಕೊಳ್ಳುತ್ತಾನೆ. ಈ ಗ್ಯಾಂಗ್ ಕೊಚ್ಚಿನ್ ಅನ್ನು ಕೇಂದ್ರವಾಗಿಟ್ಟುಕೊಂಡು ಅಕ್ರಮ ಚಟುವಟಿಕೆ, ಸುಲಿಗೆ, ಅಪಹರಣ, ಸ್ಮಗ್ಲಿಂಗ್ ಮುಂತಾದ ಅಕ್ರಮ ವ್ಯವಹಾರವನ್ನು ನಡೆಸುತ್ತಿತ್ತು. ಅಲ್ಲದೆ, ಶಾಬರ್‌ನೊಂದಿಗೆ ಕಾಶ್ಮೀರದ ಜಬ್ಬಾರ್ ಎಂಬಾತನ ಪರಿಯಚವಾಗಿ ಕಾಶ್ಮೀರದ ಉಗ್ರಗಾಮಿ ಚಟುವಟಿಕೆಗಳಿಗೆ ಶಾಬರ್ ಹಾಗೂ ಅನಾಸ್ ಸೇರಿಕೊಂಡು ದಕ್ಷಿಣ ಭಾರತದ ಯುವಕರನ್ನು ಕಳುಹಿಸಿಕೊಡುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಆರೋಪದಲ್ಲಿ ಕೇಂದ್ರೀಯ ತನಿಖಾ ತಂಡ ಅನಾಸ್ ಹಾಗೂ ಶಾಬರ್‌ನನ್ನು ಬಂಧಿಸುತ್ತದೆ. ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಅನಾಸ್ ಒಂದೂವರೆ ವರ್ಷಗಳ ಕಾಲ ಜೈಲು ಶಿಕ್ಷೆಯ ಬಳಿಕ ಜಾಮೀನಿನಲ್ಲಿ ಬಿಡುಗಡೆ ಹೊಂದಿ, ಆರೋಪ ಮುಕ್ತನಾದರೆ, ಶಾಬರ್‌ನಿಗೆ ಜೀವಾವಧಿ ಶಿಕ್ಷೆಯಾಗುತ್ತದೆ.

ಬಳಿಕ ತನ್ನ ಗುರು ಶಾಬರ್ ಗ್ಯಾಂಗ್‌ನ ನಾಯಕತ್ವವನ್ನು ಅನಾಸ್ ವಹಿಸಿಕೊಳ್ಳುತ್ತಾನೆ. ಈತ ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿಯೂ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದು, ಕೇರಳದ ಬಹುತೇಕ ಎಲ್ಲ ಕೈಗಾರಿಕೆಗಳೂ ಈತನಿಗೆ ಹಫ್ತಾ ನೀಡಬೇಕಾಗಿತ್ತು. ಎಲ್ಲೆಡೆ ಸಂಚರಿಸಬೇಕಾದರೆ ನಾಲ್ಕೈದು ವಾಹನಗಳಲ್ಲಿ 50ಕ್ಕೂ ಮಿಗಿಲಾದ ಅಂಗರಕ್ಷಕರನ್ನು ಬೆಂಗಾವಲಾಗಿ ಕರೆದೊಯ್ಯುತ್ತಿದ್ದ. ಕೇರಳದಲ್ಲಿ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. 

ಕೊಲೆಯಾದ ಉಣ್ಣಿಕೃಷ್ಣನ್ ತಂಡದ ದ್ವಿತೀಯ ಸ್ಥಾನಿ: ಅನಾಸ್‌ನ ತಂಡದಲ್ಲಿ ಅನಾಸ್ ಬಳಿಕದ ಸ್ಥಾನವನ್ನು ಉಣ್ಣಿಕೃಷ್ಣನ್ ಹೊಂದಿದ್ದ. ತಂಡದ ಉಳಿದ ಸದಸ್ಯರೆಲ್ಲರೂ ಅನಾಸ್‌ಗೆ ನೀಡಿದ ಗೌರವವನ್ನೇ ಉಣ್ಣಿಕೃಷ್ಣನ್‌ಗೆ ನೀಡಬೇಕಾಗಿತ್ತು. ಉಣ್ಣಿಕೃಷ್ಣನ್ ಇಂದಲ್ಲ ನಾಳೆ ಈತ ತನ್ನ ಭೂಗತ ಲೋಕಕ್ಕೆ ಕುತ್ತು ತರುತ್ತಾನೆಂದು ಭಾವಿಸಿ, ತನ್ನದೇ ಸಹಚರರಿಂದ ಯೋಜಿತವಾಗಿ ಉಣ್ಣಿಕೃಷ್ಣನ್‌ನನ್ನು ಉಪ್ಪಿನಂಗಡಿಯಲ್ಲಿ ಹತ್ಯೆ ಮಾಡಿಸಿರುವುದಾಗಿ ಅನಾಸ್ ತನಿಖೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News