ಮೋದಿ ಅತೀಹೆಚ್ಚು ವಿಶ್ವಾಸಾರ್ಹ ಗೆಳೆಯರಲ್ಲಿ ಒಬ್ಬರು: ಜಪಾನ್ ಪ್ರಧಾನಿ

Update: 2018-10-28 17:31 GMT

ಟೋಕಿಯೊ,ಅ.28: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಪಾನ್ ಅತೀಹೆಚ್ಚು ವಿಶ್ವಾಸವನ್ನಿರಿಸಬಹುದಾದ ಗೆಳೆಯರಲ್ಲಿ ಒಬ್ಬರು ಎಂದು ಅಲ್ಲಿನ ಪ್ರಧಾನಿ ಶಿಂರೊ ಅಬೆ ರವಿವಾರ ಅಭಿಪ್ರಾಯಿಸಿದ್ದಾರೆ. ಮುಕ್ತ ಮತ್ತು ತೆರೆದ ಇಂಡೊ-ಪೆಸಿಫಿಕ್ ಅನ್ನು ಸೃಷ್ಟಿಸುವ ಇರಾದೆಯಿಂದ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಇಂಗಿತವನ್ನು ಅಬೆ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಶಕ್ತಿಯಾಗಿ ಭಾರತ ಇಡೀ ಪ್ರದೇಶವನ್ನು ಮತ್ತು ಜಗತ್ತಿನ ಸಮೃದ್ಧಿಯನ್ನು ಮುನ್ನಡೆಸುತ್ತಿದೆ. ಪ್ರಧಾನಿ ಮೋದಿ ಒಂದು ಅತ್ಯುನ್ನತ ದೇಶದ ಅಭೂತಪೂರ್ವ ನಾಯಕರಾಗಿದ್ದಾರೆ ಎಂದು ಜಪಾನ್ ಪ್ರಧಾನಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಜಪಾನ್ ಮತ್ತು ಭಾರತ ನಡುವಿನ ಸಂಬಂಧ ಜಗತ್ತಿನಲ್ಲಿ ಅತೀಹೆಚ್ಚು ಸಾಮರ್ಥ್ಯದಿಂದ ಹರಸಲ್ಪಟ್ಟಿದೆ ಎಂದು ನಾನು ನಂಬುತ್ತೇನೆ ಮತ್ತು ಯಾವಾಗಲೂ ಹೇಳುತ್ತೇನೆ ಎಂದು ಅಬೆ ತಿಳಿಸಿದ್ದಾರೆ.

ಜಪಾನ್-ಭಾರತ ಸಹಕಾರವು ಭದ್ರತೆ, ಹೂಡಿಕೆ, ಮಾಹಿತಿ, ತಂತ್ರಜ್ಞಾನ, ಕೃಷಿ,ಆರೋಗ್ಯ,ಪರಿಸರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸವಿಸ್ತಾರವಾಗಿ ಬೆಳೆದಿದೆ ಎಂದು ಅಬೆ ವಿವರಿಸಿದ್ದಾರೆ. ಜಪಾನ್‌ನ ಶಿಂಕನ್ಸೆನ್ ಬುಲೆಟ್ ಟ್ರೈನ್ ಮುಂಬೈ ಮತ್ತು ಅಹಮದಾಬಾದ್ ಮಧ್ಯೆ ಸಂಚಾರ ಆರಂಭಿಸಿದ ದಿನ ಭವಿಷ್ಯದಲ್ಲಿ ಜಪಾನ್-ಭಾರತ ಗೆಳೆತನಕ್ಕೆ ಮಿನುಗುವ ಚಿಹ್ನೆಯಾಗಲಿದೆ ಎಂದು ಜಪಾನ್ ಪ್ರಧಾನಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿ 13ನೇ ಭಾರತ-ಜಪಾನ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜಪಾನ್ ಕೇವಲ ಭಾರತದೊಂದಿಗೆ ದ್ವಿಪಕ್ಷೀಯ ವಾರ್ಷಿಕ ಸಮಾವೇಶ ನಡೆಸುತ್ತದೆ. ಭಾರತ ,ಜಪಾನ್ ಮತ್ತು ರಶ್ಯಾ ಜೊತೆ ಈ ರೀತಿಯ ಸಮಾವೇಶವನ್ನು ನಡೆಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News