×
Ad

ಜಿಲ್ಲಾಧಿಕಾರಿ ಕೆಂಗಣ್ಣಿಗೆ ಗುರಿಯಾದ ರಾ.ಹೆ. ಪ್ರಾಧಿಕಾರದ ಮೌನ

Update: 2018-10-29 22:43 IST

ಮಂಗಳೂರು, ಅ.29: ಸುರತ್ಕಲ್ ಟೋಲ್‌ಗೇಟ್ ನವೀಕರಣ, ಹೆದ್ದಾರಿ ಸಮಸ್ಯೆಗಳ ವಿರುದ್ಧ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸುರತ್ಕಲ್ ಟೋಲ್‌ಗೇಟ್ ವಿರುದ್ಧದ ಹೋರಾಟ ಸಮಿತಿಯ ಪದಾಧಿಕಾರಿಗಳಿಂದ ಧರಣಿ ಉದ್ದೇಶ, ಪ್ರಮುಖಾಂಶಗಳನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆಲಿಸಿದರು.

ಸಭೆಯಲ್ಲೇ ಉಪಸ್ಥಿತರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸುರತ್ಕಲ್ ಟೋಲ್‌ಗೇಟ್ ನವೀಕರಣ, ಹೆದ್ದಾರಿ ಸಮಸ್ಯೆಗಳನ್ನು ಆಲಿಸಿದರೆ ಹೊರತು, ಯಾವುದೇ ರೀತಿಯಲ್ಲಿ ಸ್ಪಂದಿಸದೇ ಸುಮ್ಮನೆ ಕುಳಿತು ಮೌನಾಚರಣೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಕೆಂಗಣ್ಣಿಗೆ ಗುರಿಯಾದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಜಿತ್ ಅವರ ಅನುಪಸ್ಥಿತಿಯಲ್ಲಿ ಪ್ರಾಧಿಕಾರದ ಪ್ರತಿನಿಧಿಗಳು ಹಾಜರಿದ್ದರು. ಸುರತ್ಕಲ್ ಟೋಲ್‌ಗೇಟ್ ವಿರುದ್ಧದ ಹೋರಾಟ ಸಮಿತಿಯ ಪದಾಧಿಕಾರಿಗಳ ಸಮಸ್ಯೆಗಳಿಗೆ ಉತ್ತರಿಸುವ ಬದಲು ತಮಗೆ ಸಂಬಂಧವಿಲ್ಲ ಎನ್ನುವಂತೆ ದಿಲ್ಲಿಯ ಕಡೆಗೆ ಬೊಟ್ಟು ಮಾಡುತ್ತಿದ್ದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ, ಕೂಳೂರು ಹಳೆಯ ಸೇತುವೆಯನ್ನು ಏಕಾಏಕಿ ಮುಚ್ಚುವುದಿಲ್ಲ. ಜನತೆಯ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಲಾಗುವುದು. ಅದಕ್ಕಾಗಿ ಉಪಸಮಿತಿ ನೇಮಕ ಮಾಡಲಾಗಿದೆ. ಹೆದ್ದಾರಿ ಪ್ರಾಧಿಕಾರದ ಸಮಸ್ಯೆಗಳು ಸ್ಥಳೀಯವಾಗಿ ಪರಿಹಾರವಾಗುವುದಿಲ್ಲ. ಅ.30ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹೆದ್ದಾರಿ ಪ್ರಾಧಿಕಾರದ ರಾಜ್ಯ ಮಟ್ಟದ ನಿರ್ದೇಶಕರಲ್ಲಿ ಟೋಲ್‌ಗೇಟ್ ವಿಲೀನ ತೀರ್ಮಾನದ ಉಲ್ಲಂಘನೆ ಆಗಿರುವ ಕುರಿತು ಮಾತನಾಡಲಾಗುವುದು ಎಂದು ತಿಳಿಸಿದರು.

ಉಸ್ತುವಾರಿ ಸಚಿವರು ನ.1ರಂದು ಮಂಗಳೂರಿಗೆ ಆಗಮಿಸುತ್ತಿದ್ದು, ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಮಸ್ಯೆಗಳು ರಾಜ್ಯ ಮಟ್ಟದಲ್ಲಿ ಇತ್ಯರ್ಥ ಆಗುವ ಅಗತ್ಯವಿದೆ. ಅದಕ್ಕಾಗಿ ಒಂದು ವಾರದೊಳಗಡೆ ಬೆಂಗಳೂರಿನಲ್ಲಿ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ನಡೆಸಿ ಟೋಲ್ ಗೇಟ್ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಸುರತ್ಕಲ್ ಟೋಲ್‌ಗೇಟ್ ವಿರುದ್ಧದ ಹೋರಾಟ ಸಮಿತಿ ಪದಾಧಿಕಾರಿಗಳು, ತಮ್ಮ ಬೇಡಿಕೆಗಳು ಈಡೇರುವವರೆಗೂ ಅನಿರ್ಧಿಷ್ಟಾವಧಿ ಧರಣಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಸುರತ್ಕಲ್‌ನ ಪ್ರಸ್ತುತ ಟೋಲ್‌ನ್ನು ಸಂಗ್ರಹಿಸುತ್ತಿರುವ ಏಜೆನ್ಸಿಯ ಪರವಾಣಿಗೆ ಇದೇ ಅ.31ರಂದು ಪೂರ್ಣಗೊಳ್ಳಲಿದೆ. ಆದರೆ ನೂತನವಾಗಿ ಟೋಲ್ ಸಂಗ್ರಹಿಸುವ ಏಜೆನ್ಸಿಯಿಂದ ಯಾವುದೇ ಪ್ರತಿನಿಧಿಗಳು ಸಭೆಗೆ ಆಗಮಿಸಿರಲಿಲ್ಲ. ಹಾಗಾಗಿ ಆ.31ರ ನಂತರವೂ ಹಳೆಯ ಏಜೆನ್ಸಿಯವರೇ ಅದೇ ಟೋಲ್ ದರವನ್ನು ಸಂಗ್ರಹಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸಭೆಯಲ್ಲಿ ರಾ.ಹೆ. ನಿರ್ವಹಣಾ ಏಜೆನ್ಸಿ ಅಧಿಕಾರಿಗಳು, ಮನಪಾ ಸದಸ್ಯರಾದ ರೇವತಿ ಪುತ್ರನ್, ದಯಾನಂದ ಶೆಟ್ಟಿ, ಪುರುಷೋತ್ತಮ ಹಾಗೂ ರಾಜೇಶ್ ಶೆಟ್ಟಿ ಪಡ್ರೆ, ಸುರತ್ಕಲ್ ಟೋಲ್‌ಗೇಟ್ ವಿರುದ್ಧದ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಮುನೀರ್ ಕಾಟಿಪಳ್ಳ, ಮೂಸಬ್ಬ ಪಕ್ಷಿಕೆರೆ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News