×
Ad

ಮೆಲ್ಕಾರ್: ಟ್ಯಾಂಕರ್ ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2018-10-29 23:14 IST

ಬಂಟ್ವಾಳ, ಅ. ೨೯: ಟ್ಯಾಂಕರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ವಿಟ್ಲ ಪರಿಸರದ ಪಾತ್ರತೋಟದ ಕೆಲಿಂಜ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಹಸನ್ ಶಾಹಿಕ್ (28) ಮೃತರು ಎಂದು ಗುರುತಿಸಲಾಗಿದೆ.

ಹಸನ್ ಅವರು ಮೂಡಬಿದಿರೆಯಲ್ಲಿ ಬುರ್ಕಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮೂಡಬಿದಿರೆಯಿಂದ ಬಿ.ಸಿ.ರೋಡ್‌ವರೆಗೆ ಬಸ್‌ನಲ್ಲಿ ಬಂದು, ಇಲ್ಲಿಂದ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಇಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಮೆಲ್ಕಾರ್‌ನ ಬೋಳಂಗಡಿ ಸಮೀಪ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಹಸನ್ ಮೈಮೇಲೆ ಟ್ಯಾಂಕರ್ ಹರಿದಿದೆ. ಘ ಟನೆಯಿಂದ ಗಂಭೀರವಾಗಿ ಗಾಯ ಗೊಂಡಿದ್ದ ಹಸನ್ ರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿಯ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತ ನಂತರ ಚಾಲಕ ಟ್ಯಾಂಕರ್ ಸಹಿತ ಪರಾರಿಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಬಂಟ್ವಾಳ ಟ್ರಾಫಿಕ್ ಪೊಲೀಸರು ಮಿತ್ತೂರು ನಲ್ಲಿ ಟ್ಯಾಂಕರ್ ಅನ್ನು ತಡೆದು, ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್ಸೈ ಮಂಜುಳಾ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News