×
Ad

ಬಿಜೆಪಿ ನನ್ನನ್ನು ಲಘುವಾಗಿ ಪರಿಗಣಿಸಬಾರದು: ಗೋವಾ ಮಾಜಿ ಸಿಎಂ ಪಾರ್ಸೇಕರ್

Update: 2018-10-30 19:08 IST

ಪಣಜಿ,ಅ.30: ಮುಂಬರುವ ಮಾಂಡ್ರೆಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಕಾಂಗ್ರೆಸ್ ಶಾಸಕ ದಯಾನಂದ ಸೋಪ್ತೆ ಅವರನ್ನು ಕಣಕ್ಕಿಳಿಸಲು ಆಡಳಿತಾರೂಢ ಬಿಜೆಪಿ ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಲಕ್ಷ್ಮೀಕಾಂತ ಪಾರ್ಸೇಕರ್ ಅವರು ತಾನು ಪಕ್ಷದ ವಿರುದ್ಧ ಬಂಡಾಯ ಅಭ್ಯಥಿಯಾಗಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಸೋಪ್ತೆ ಮತ್ತು ಇನ್ನೋರ್ವ ಕಾಂಗ್ರೆಸ್ ಶಾಸಕ ಸುಭಾಷ ಶಿರೋಡ್ಕರ್ ಅವರು ಇತ್ತೀಚಿಗಷ್ಟೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಇದು ಕಾಂಗ್ರೆಸ್‌ಗೆ ಆಘಾತವನ್ನುಂಟು ಮಾಡಿದೆ.

ಮಾಂಡ್ರೆಂ ಉಪಚುನಾವಣೆಗೆ ಮುನ್ನ ಬಿಜೆಪಿಯೇತರ ಮತಗಳ ಕ್ರೋಢೀಕರಣದಲ್ಲಿ ಕಾಂಗ್ರೆಸ್ ತೊಡಗಿದ್ದು,ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾರ್ಸೇಕರ್,ಬಿಜೆಪಿಯು ತನ್ನನ್ನು ಲಘುವಾಗಿ ಪರಿಗಣಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ ಚೋಡನಕರ್ ಅವರು ಎರಡು ದಿನಗಳ ಹಿಂದಷ್ಟೇ 2017ರವರೆಗೆ ಮಾಂಡ್ರೆಂ ಶಾಸಕರಾಗಿದ್ದ ಪಾರ್ಸೇಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

2017ರ ಚುನಾವಣೆಯಲ್ಲಿ ಮಾಂಡ್ರೆಂ ವಿಧಾನಸಭಾ ಕ್ಷೇತ್ರದಲ್ಲಿ ಸೋಪ್ತೆ ಅವರು ಪಾರ್ಸೇಕರ್ ವಿರುದ್ಧ ಗೆದ್ದಿದ್ದರು.

ತನ್ನ ಸಂಪೂರ್ಣ ಯೋಜನೆಯನ್ನು ತಾನೀಗ ಬಹಿರಂಗಗೊಳಿಸುವುದಿಲ್ಲ. ತಾನು ಪಕ್ಷದ ವಿರುದ್ಧ ಎಂದೂ ಬಂಡೇಳುವುದಿಲ್ಲ ಅಥವಾ ಪಕ್ಷವನ್ನು ತೊರೆಯುವುದಿಲ್ಲ ಎಂಬ ಭಾವನೆ ಬಿಜೆಪಿಯಲ್ಲಿದೆ. ಕೆಲವೊಮ್ಮೆ ನಿಮ್ಮ ಒಳ್ಳೆಯ ಗುಣಗಳೇ ನಿಮ್ಮ ಶತ್ರುಗಳಾಗುತ್ತವೆ. ತನ್ನ ವಿಷಯದಲ್ಲಿಯೂ ಅದೇ ಆಗಿದೆ. ಆದರೆ ಈ ಬಾರಿ ಪಕ್ಷವು ತನ್ನನ್ನು ಲಘುವಾಗಿ ಪರಿಗಣಿಸಬಾರದು ಎಂದು ಪಾರ್ಸೇಕರ್ ಹೇಳಿದರು.

2014-17ರ ಅವಧಿಗೆ ಗೋವಾ ಮುಖ್ಯಮಂತ್ರಿಯಾಗಿದ್ದ ಪಾರ್ಸೇಕರ್ ಬಿಜೆಪಿಯ ಹಳೆಯ ಸದಸ್ಯರಲ್ಲೋರ್ವರಾಗಿದ್ದಾರೆ. ಅವರು 1994ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News