ಬೆಂಗಳೂರು, ಮಣಿಪಾಲದಲ್ಲಿ ‘ಬ್ರಾಂಡ್ ಸ್ಕಾನ್’ ಉತ್ಸವ
ಉಡುಪಿ, ಅ.30: ಮಣಿಪಾಲ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್ಸಿಟ್ಯೂಟ್ ವಿದ್ಯಾರ್ಥಿಗಳು ಈ ಬಾರಿ ಇಂಡಿಯಾ ರೈಡ್ಸ್ ಪ್ರಾಯೋಜಕತ್ವದಲ್ಲಿ ‘ಬ್ರಾಂಡ್ ಸ್ಕಾನ್’ ಮಾರುಕಟ್ಟೆ ಸಂಶೋಧನೆ ಕಾರ್ಯಕ್ರಮವನ್ನು ನ.4ರಂದು ಮಣಿಪಾಲ ಕೆಎಂಸಿ ಗ್ರೀನ್ಸ್‌ನಲ್ಲಿ ಹಾಗೂ ನ.17 ಮತ್ತು 18ರಂದು ಬೆಂಗಳೂರಿನ ಒರೈನ್ ಮಹಲ್‌ನಲ್ಲಿ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನೆ ಹಾಗೂ ಸ್ಪರ್ಧೆಗಳ ವಿಜೇತರಿಗೆ ಒಟ್ಟು 2ಲಕ್ಷ ರೂ. ಮೊತ್ತದ ಬಹುಮಾನ ನೀಡಲಾಗುವುದು. ಇದರಲ್ಲಿ ಸುಮಾರು 10ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ ಎಂದು ಬ್ರಾಂಡ್ ಸ್ಕಾನ್ ಸಂಚಾಲಕ ಪ್ರಜ್ವಲ್ ಅಯ್ಯರ್ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದ್ದಾರೆ.
5ರಿಂದ 14ವರ್ಷದೊಳಗಿನವರಿಗೆ ಹಾಡುಗಾರಿಕೆ, ನೃತ್ಯ, ನಟನೆ, ಛದ್ಮವೇಷ, ಚಿತ್ರಕಲೆ ಸ್ಪರ್ಧೆ ‘ಲಿಟಲ್ ಸ್ಟಾರ್ಸ್’, ಚಲನಚಿತ್ರ ಕಥೆಯನ್ನು ಹಾಸ್ಯದ ರೀತಿಯಲ್ಲಿ ನಟಿಸಿ ಹಾಗೂ ಮಿಮಿಕ್ರಿ ಮಾಡುವ ಸ್ಪರ್ಧೆ ‘ಅನ್‌ಸ್ಕ್ರೀಪ್ಟೆಡ್’, ನೃತ್ಯ ಸ್ಪರ್ಧೆ ‘ಪುಟ್‌ಲೂಸ್’, ಫ್ಯಾಶನ್ ತಂಡಗಳು ಭಾಗವಹಿಸುವ ವಿಶೇಷ ಕಾರ್ಯಕ್ರಮ ‘ಪನಾಷ್’ನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ರಾಂಡ್ ಸ್ಕಾನ್ ಸಹಸಂಚಾಲಕ ಅನುರಾಗ್ ಮಣಿಕ್, ಕಾರ್ಯಕ್ರಮ ಸಂಯೋಜಕಿ ರಿತಿಕಾ ಸಂತೋಷ್ ಉಪಸ್ಥಿತರಿದ್ದರು.