ಫೇಸ್‌ಬುಕ್‌ನಲ್ಲಿ ಮೋದಿ ಅವಹೇಳನ: ಅಸ್ಸಾಂನ ಶಿಕ್ಷಕನ ಬಂಧನ
ಹೊಸದಿಲ್ಲಿ, ಅ.30: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆನ್ನಲಾದ ಅಸ್ಸಾಂನ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಲಖಿಪುರ ಹೈಸ್ಕೂಲ್‌ನಲ್ಲಿ ಹಿಂದಿ ಶಿಕ್ಷಕನಾಗಿರುವ ಅಬು ತಾಲಿಬ್ ಬಂಧಿತ ವ್ಯಕ್ತಿ. ತಾಲಿಬ್ ತನ್ನ ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿಯ ಬಗ್ಗೆ ಅವಹೇಳನಾತ್ಮಕ ಬರಹ ಪೋಸ್ಟ್ ಮಾಡಿರುವುದಾಗಿ ಬಿಜೆಪಿಯ ಲಖಿಪುರ ಘಟಕಾಧ್ಯಕ್ಷರು ಹಾಗೂ ಗೋಲ್‌ಪಾರ ಜಿಲ್ಲಾ ಶಾಲೆಗಳ ನಿರೀಕ್ಷಕರು ಪ್ರತ್ಯೇಕ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಪೊಲೀಸರು ತಾಲಿಬ್‌ರನ್ನು ಬಂಧಿಸಿದ್ದಾರೆ. ಪ್ರಧಾನಿ ವಿರುದ್ಧ ಅವಹೇಳನಾತ್ಮಕ ಹೇಳಿಕೆ ನೀಡಿರುವ ಆರೋಪದಲ್ಲಿ ಶಿಕ್ಷಕ ತಾಲಿಬ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದು ತನಿಖೆ ನಡೆಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ತಪ್ಪಿತಸ್ತ ಎಂದು ಕಂಡುಬಂದಲ್ಲಿ ಅವರನ್ನು ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಗೋಲ್‌ಪಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಅಮಿತವ ಸಿನ್ಹ ಹೇಳಿದ್ದಾರೆ.
ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ತಾಲಿಬ್‌ರನ್ನು ಗೋಲ್‌ಪಾರ ಜಿಲ್ಲಾ ಶಾಲೆಗಳ ನಿರೀಕ್ಷಕರು ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.