ಮತದಾರರ ಗುರುತಿನ ಚೀಟಿ ಕೆಲಸ ಕಾರ್ಯಗಳಿಂದ ದೂರ ಸರಿದ ಅಂಗನವಾಡಿ ಕಾರ್ಯಕರ್ತೆಯರು !
ಮಂಗಳೂರು, ಅ.30: ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ಕಳಚುವಿಕೆ, ಸ್ಥಾನಪಲ್ಲಟ ಇತ್ಯಾದಿಗೆ ಸಂಬಂಧಿಸಿದ ಅರ್ಜಿ ಫಾರಂಗಳನ್ನು ಗ್ರಾಮಕರಣಿಕರ ಕಚೇರಿ ಮೂಲಕ ಕಳುಹಿಸಿಕೊಟ್ಟರೂ ಕೂಡಾ ಕಳೆದ ಚುನಾವಣೆಯ ಸಂದರ್ಭ ಮಾಡಿದ ಕೆಲಸ ಕಾರ್ಯಗಳಿಗೆ ಗೌರವ ವೇತನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಮತದಾರರ ಗುರುತಿನ ಚೀಟಿ ಪ್ರಕ್ರಿಯೆಯಿಂದ ಅಂಗನವಾಡಿ ಕಾರ್ಯಕರ್ತೆಯರು ದೂರ ಸರಿದಿದ್ದಾರೆ. ಇದರ ನೇರ ಪರಿಣಾಮ ಮತದಾರರ ಮೇಲಾಗಿವೆ.
ಕಳೆದ ಚುನಾವಣೆಯ ಸಂದರ್ಭ ಬೂತ್ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ತಮಗೆ ಪ್ರಯಾಣ ಭತ್ತೆ, ದಿನಭತ್ತೆ ಸಹಿತ ಯಾವುದೇ ಸವಲತ್ತು ಗಳನ್ನು ನೀಡದೆ ಚುನಾವಣಾ ಆಯೋಗವು ವಂಚಿಸಿದೆ ಎಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯರು ಅ. 5ರಂದು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ್ದರು. ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರಲ್ಲದೆ, ಚುನಾವಣಾ ಆಯೋಗದ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಅಂಗನವಾಡಿ ಕೇಂದ್ರದ ಕೆಲಸ ಕಾರ್ಯಗಳ ಮಧ್ಯೆ ಜಿಲ್ಲಾಧಿಕಾರಿಗಳ ಒತ್ತಡ ಹಾಗೂ ಆದೇಶದ ಮೇಲೆ ಇತರ ಇಲಾಖೆಗಳ ಕೆಲಸಗಳನ್ನು ಕೂಡಾ ಮಾಡಲಾಗುತ್ತದೆ. ಅದರಂತೆ ಚುನಾವಣಾ ಆಯೋಗವು ನಿಗದಿಪಡಿಸಿದ ಕೆಲಸಗಳನ್ನು ಕೂಡಾ ನಿಷ್ಠೆಯಿಂದ ಮಾಡಲಾಗುತ್ತದೆ. ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಮತದಾರರ ಸೇರ್ಪಡೆ, ತಿದ್ದುಪಡಿ, ಹೆಸರು ಕಳಚುವಿಕೆ, ಸ್ಥಾನಪಲ್ಲಟ, ಅರ್ಜಿ ಫಾರಂ ಸ್ವೀಕರಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು, ಗುರುತಿನ ಚೀಟಿ, ಭಾವಚಿತ್ರಗಳನ್ನು ಮನೆ ಮನೆಗೆ ತಲುಪಿಸುವುದು, ಮತಯಂತ್ರದ ಬಗ್ಗೆ ಮತದಾರರಿಗೆ ಮಾಹಿತಿ ಇತ್ಯಾದಿ ಕೆಲಸ ಕಾರ್ಯಗಳನ್ನು ಮಾಡಿದ್ದರೂ ಕೂಡಾ ಪ್ರಯಾಣ ಭತ್ತೆ, ದಿನಭತ್ತೆ ನೀಡಿಲ್ಲ. ಅರ್ಜಿಗಳ ವಿಲೇವಾರಿ ಸಂದರ್ಭ ವೈಯಕ್ತಿಕವಾಗಿ ಕನಿಷ್ಠ 200 ರೂ. ಖರ್ಚು ಮಾಡಲಾಗುತ್ತದೆ. ಇದನ್ನು ಜಿಲ್ಲಾಧಿಕಾರಿ, ತಹಶೀಲ್ದಾರರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದರು.
ವರ್ಷಪೂರ್ತಿ ದುಡಿಯುವ ಬೂತ್ ಮಟ್ಟದ ಅಧಿಕಾರಿಗಳಿಗೆ ಚುನಾವಣಾ ಆಯೋಗವು ಕೇವಲ 6 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತದೆ. ಆದರೆ, ಚುನಾವಣಾ ಸಂದರ್ಭ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಕನಿಷ್ಠ 350 ರೂ.ನಿಂದ 1,500 ರೂ.ವರೆಗೆ ಪ್ರೋತ್ಸಾಹ ಧನ ನೀಡುತ್ತಿದೆ. ಈ ತಾರತಮ್ಯ ಯಾಕೆ? ಶ್ರಮಕ್ಕೆ ತಕ್ಕ ಪ್ರತಿಫಲ ಯಾಕಿಲ್ಲ ?ಎಂದು ಧರಣಿ ನಿರತರು ಪ್ರಶ್ನಿಸಿದ್ದರು. ಆದರೆ, ಧರಣಿ ನಡೆಸಿ ತಿಂಗಳಾಗುತ್ತಾ ಬಂದರೂ ಜಿಲ್ಲಾಡಳಿತವು ಬೂತ್ ಮಟ್ಟದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯನ್ನು ಈಡೇರಿಸಿಲ್ಲ. ಜಿಲ್ಲಾಧಿಕಾರಿಯ ಪರವಾಗಿ ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದ್ದು ಬಿಟ್ಟರೆ ಬಳಿಕ ಯಾವ ಕ್ರಮವನ್ನೂ ಜರುಗಿಸಿಲ್ಲ.
ಇದರಿಂದ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತೆಯರು ಸಂಘದ ಪ್ರಮುಖರು ಸೂಚನೆ ನೀಡದ ಹೊರತು ಮತದಾರರ ಗುರುತಿನ ಚೀಟಿ ನೋಂದಣಿ ಪ್ರಕ್ರಿಯೆಯಿಂದ ದೂರ ಸರಿದಿದ್ದಾರೆ. ಹಾಗಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ತುದಿಗಾಲಲ್ಲಿ ನಿಂತಿರುವ ಹೊಸ ಮತದಾರರು, ಹೆಸರು, ವಿಳಾಸ ತಿದ್ದುಪಡಿ, ಒಂದೆಡೆಯಿಂದ ಹೆಸರು ಕಳಚಿ ಇನ್ನೊಂದೆಡೆ ಹೆಸರು ಸೇರಿಸಲು ಮುಂದಾದವರು ಹತಾಶರಾಗಿದ್ದಾರೆ. ಸಂಬಂಧಪಟ್ಟ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದಾಗ ಸದ್ಯ ನಾವು ಆ ಕೆಲಸ ಸ್ಥಗಿತಗೊಳಿಸಿದ್ದೇವೆ ಎಂಬ ಉತ್ತರ ಕೇಳಿ ಬರುತ್ತಿದೆ.
ಇವೆಲ್ಲದರ ಮಧ್ಯೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಅ.20ರಂದು ಆದೇಶ ಹೊರಡಿಸಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ಕರ್ತೆಯರು ಕೇವಲ 6 ಸೇವೆಗಳನ್ನು ಒದಗಿಸಿದರೆ ಸಾಕು. ಉಳಿದಂತೆ ಆರೋಗ್ಯ, ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ಮಾಡಬೇಕಿಲ್ಲ ಎಂದಿದ್ದಾರೆ. ಈ ಆದೇಶ ಅಂಗನವಾಡಿ ಕಾರ್ಯಕರ್ತೆಯರ ಆತ್ಮಸ್ಥೈರ್ಯ ಹೆಚ್ಚಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆರ ಮತ್ತು ಸಹಾಯಕಿಯರ ಸಂಘದ ಗೌರವ ಸಲಹೆಗಾರ್ತಿ ವಿಶಾಲಾಕ್ಷಿ ಶಿಶು ಅಭಿವೃದ್ಧಿ ಇಲಾಖೆಯ ಹೊರತು ಇತರ ಕೆಲಸಗಳನ್ನು ಮಾಡಬಾರದು ಎಂಬ ಸೂಚನೆ ನಮಗೆ ಮಾಧ್ಯಮದಿಂದ ಬಂದಿದೆ. ನಮಗೆ ನಮ್ಮದೇ ಇಲಾಖೆಯ 6 ಸೇವೆಗಳೇ ಭಾರವಾಗಿವೆ. ಉಳಿದಂತೆ ಜಿಲ್ಲಾಧಿಕಾರಿಯ ಸೂಚನೆಯ ಮೇರೆಗೆ ಕಂದಾಯ, ಆರೋಗ್ಯ ಇಲಾಖೆಯ ಸುಮಾರು 30ಕ್ಕೂ ಅಧಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೆವು. ಮೊದಲೇ ನಮ್ಮ ಗೌರವಧನ ಬೆರಳೆಣಿಕೆಯಷ್ಟಿದೆ. ಅದರ ಮೇಲೆ ಕೆಲಸದ ಹೊರೆಯೂ ಇದೆ. ನಮಗೆ ವರ್ಷಪೂರ್ತಿ ಮತದಾನದ ಗುರುತಿನ ಚೀಟಿಯ ಕೆಲಸ ಕಾರ್ಯಗಳಿವೆ. ಅದಕ್ಕೆ ಮಾಸಿಕ 500 ರೂ. ಗೌರವಧನ ನೀಡಲಾಗುತ್ತದೆ. ಇನ್ನು ಚುನಾವಣೆಯ ಸಂದರ್ಭ ಹೆಚ್ಚುವರಿಯಾಗಿ ಕೆಲಸ ಮಾಡಿಸಲಾಗುತ್ತದೆ. ಅದಕ್ಕೆ ನಯಾಪೈಸೆ ಸಿಗುವುದಿಲ್ಲ. ಕಳೆದ ಬಾರಿಯ ಚುನಾವಣೆಯ ವೇತನವೂ ಸಿಕ್ಕಿಲ್ಲ. ಟಿಎ, ಡಿಎ ಕೂಡ ಇಲ್ಲ. ಒಟ್ಟಾರೆ ನಾವು ಸರಕಾರದ ಜೀತದಾಳುಗಳಾಗಿದ್ದೇವೆ. ನಮ್ಮ ಮೇಲಾಗುವ ಅನ್ಯಾಯದ ವಿರುದ್ಧ ನಾವು ಪ್ರತಿಭಟನೆ ನಡೆಸಿದರೂ ಕೂಡಾ ಪ್ರಯೋಜನವಾಗಿಲ್ಲ. ಹಾಗಾಗಿ ನಮಗೆ ಸೂಕ್ತ ನಿರ್ದೇಶನ ಬಾರದ ಹೊರತು ನಾವು ಅನ್ಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದಿದ್ದಾರೆ.
ಸೂಕ್ತ ಕ್ರಮ: ಬಿಎಲ್‌ಒ ಆಗಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಚುನಾವಣೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನಿಭಾಯಿಸ ಲೇಬೇಕು. ಒಂದು ವೇಳೆ ಅವರು ಆ ಜವಾಬ್ದಾರಿಯನ್ನು ನಿಭಾಯಿಸದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಎಚ್ಚರಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಇಲಾಖೇತರ ಕೆಲಸ ಕಾರ್ಯಗಳನ್ನು ಮಾಡದಂತೆ ಆದೇಶ ಹೊರಡಿಸಿದ ಬಗ್ಗೆ ‘ವಾರ್ತಾಭಾರತಿ’ ಗಮನ ಸೆಳೆದಾಗ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.