ಪ್ರಧಾನಿ ಮೋದಿಯಿಂದ ಪಟೇಲ್ ಪ್ರತಿಮೆ ಅನಾವರಣಕ್ಕೆ ಸಿದ್ಧತೆ: ಪ್ರತಿಭಟನೆಗೆ ಸಜ್ಜಾದ ರೈತರು, ಬುಡಕಟ್ಟು ಜನರು

Update: 2018-10-30 14:16 GMT

ಹೊಸದಿಲ್ಲಿ,ಅ.30: ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎಂದು ಹೇಳಲಾಗುತ್ತಿರುವ, ಗುಜರಾತ್‌ನ ಕೆವಡಿಯಾದಲ್ಲಿ ತಲೆಯೆತ್ತಿರುವ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಪ್ರತಿಮೆಯನ್ನು ಬುಧವಾರದಂದು ಅನಾವರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸಿದ್ಧಗೊಳ್ಳುತ್ತಿರುವಂತೆಯೇ ಮತ್ತೊಂದೆಡೆ ಇದರ ವಿರುದ್ಧ ಆ ಪ್ರದೇಶದ ರೈತರು ಮತ್ತು ಬುಡಕಟ್ಟು ಜನಾಂಗದ ಜನರು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಚೋಟಾ ಉದೆಪುರ, ಪಂಚಮಹಲ್ಸ್, ವಡೋದರ ಮತ್ತು ನರ್ಮದಾ ಜಿಲ್ಲೆಯ 1,500ಕ್ಕೂ ಅಧಿಕ ರೈತರು, ಪ್ರತಿಮೆ ಅನಾವರಣದ ಸಮಯದಲ್ಲಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಈ ರೈತರು ಮಿಲ್‌ಗೆ ಮಾರಿದ್ದ ಕಬ್ಬಿಗೆ ನೀಡಬೇಕಿದ್ದ ಬಾಕಿ ಹಣವನ್ನು ಹನ್ನೊಂದು ವರ್ಷಗಳು ಕಳೆದರೂ ಇನ್ನೂ ಪಾವತಿಸಿಲ್ಲ. ಈ ಮಧ್ಯೆ ಈ ಮಿಲ್ಲನ್ನು ಕೂಡಾ ಮುಚ್ಚಲಾಗಿದೆ. ರೈತರಿಗೆ ಒಟ್ಟಾರೆ 12 ಕೋಟಿ ರೂ. ಪಾವತಿಯಾಗಬೇಕಿದೆ ಎಂದು ಪತ್ರಿಕೆ ವರದಿ ಮಾಡಿದೆ. ರೈತರು ಅನೇಕ ಬಾರಿ ಈ ವಿಷಯದಲ್ಲಿ ಸರಕಾರದ ಹಸ್ತಾಕ್ಷೇಪವನ್ನು ಕೋರಿ ಮನವಿ ಮಾಡಿದ್ದರು ಮತ್ತು ನ್ಯಾಯಾಲಯಕ್ಕೂ ಮೊರೆ ಹೋಗಿದ್ದರು. ಆದರೆ ಇದರಿಂದ ಏನೂ ಪ್ರಯೋಜನವಾಗದಿರುವ ಕಾರಣ ಪಟೇಲ್ ಪ್ರತಿಮೆ ಅನಾವರಣದ ಸಮಯದಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ಅವರು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ. ಪ್ರತಿಮೆ ಸಂಪೂರ್ಣಗೊಂಡ ಸಂಭ್ರಮಾಚರಿಸಲು ಗುಜರಾತ್ ಸರಕಾರ ಏಕತಾ ಯಾತ್ರೆ ನಡೆಸುವ ಭಿತ್ತಿಪತ್ರಗಳನ್ನು ಎಲ್ಲೆಡೆ ಹಾಕಿತ್ತು. ಆದರೆ ಈ ಭಿತ್ತಿಪತ್ರಗಳನ್ನು ಬುಡಕಟ್ಟು ಸಮುದಾಯದ ಜನರು ಹರಿದು ಎಸೆಯುತ್ತಿದ್ದಾರೆ. ಇದೀಗ ಈ ಜಾಗದಲ್ಲಿ ಬುಡಕಟ್ಟು ಜನಾಂಗದ ನಾಯಕ ಬಿರ್ಸಾ ಮುಂಡಾ ಅವರ ದೊಡ್ಡ ಭಾವಚಿತ್ರದ ಜೊತೆಗೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ರೂಪಾನಿಯ ಸಣ್ಣ ಭಾವಚಿತ್ರಗಳುಳ್ಳ ಭಿತ್ತಿಪತ್ರಗಳನ್ನು ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ.

ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿರುವ ಸರ್ದಾರ್ ಸರೋವರ ಅಣೆಕಟ್ಟಿನ ಸಮೀಪದ 22 ಗ್ರಾಮಗಳ ಮುಖ್ಯಸ್ಥರು, ನಿಮ್ಮನ್ನು ನಾವು ಏಕತೆಯ ಪ್ರತಿಮೆಯ ಅನಾವರಣಕ್ಕೆ ಸ್ವಾಗತಿಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ಸ್ಮಾರಕದ ಪರಿಣಾಮವಾಗಿ ನೈಸರ್ಗಿಕ ಸಂಪನ್ಮೂಲಗಳು ನಾಶವಾಗಿರುವ ಕಾರಣ ಸ್ಥಳೀಯ ಬುಡಕಟ್ಟು ಸಮುದಾಯಗಳ ನಾಯಕರೂ ಈ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಪತ್ರಿಕಾ ವರದಿ ತಿಳಿಸಿದೆ. ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಏಕತೆಯ ಪ್ರತಿಮೆಯಂಥ ಯೋಜನೆಗೆ ವೆಚ್ಚ ಮಾಡಿ ಪೋಲು ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ದೂರಲಾಗಿದ್ದು, ಈ ಪ್ರದೇಶದ ಅನೇಕ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳಾದ ಶಾಲೆಗಳು, ಆಸ್ಪತ್ರೆಗಳು ಮತ್ತು ಕುಡಿಯುವ ನೀರು ಕೂಡಾ ಇಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News