ಸಂಜೀವ್ ಭಟ್‌ಗೆ ಮತ್ತೆ ಜಾಮೀನು ನಿರಾಕರಣೆ: ತನಿಖಾ ಸಂಸ್ಥೆಗಳ ವಿರುದ್ಧ ಪತ್ನಿಯಿಂದ ದೌರ್ಜನ್ಯ ಆರೋಪ
ಅಹಮದಾಬಾದ್,ಅ.30: ರಾಜ್ಯದ ಸರಕಾರಿ ಸಂಸ್ಥೆಗಳು ನನ್ನ ಹಾಗೂ ನನ್ನ ಪತಿಯ ಮೇಲೆ ದೌರ್ಜನ್ಯ ನಡೆಸಲು ಪರಸ್ಪರ ಕೈಜೋಡಿಸಿವೆ ಎಂದು ಮಾಜಿ ಗುಜರಾತ್ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಪತ್ನಿ ಆರೋಪಿಸಿದ್ದಾರೆ. 22 ವರ್ಷಗಳಷ್ಟು ಹಳೆಯ ಮಾದಕ ದ್ರವ್ಯ ಪ್ರಕರಣದಲ್ಲಿ ಭಟ್‌ಗೆ ನ್ಯಾಯಾಲಯ ಮತ್ತೆ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಶ್ವೇತಾ ಭಟ್ ಈ ಹೇಳಿಕೆಯನ್ನು ನೀಡಿದ್ದಾರೆ. ಮೊದಲ ಎರಡು ವಾರ ನನ್ನ ಪತಿಯನ್ನು ನೋಡಲೂ ನನಗೆ ಅವಕಾಶ ನೀಡಲಿಲ್ಲ. ರಾಜ್ಯ ಸಿಐಡಿ ನನ್ನ ಪತಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಇಟ್ಟಿರುವುದಾದರೂ ಯಾಕೆ? ನಾವು ಎಲ್ಲಿಯೂ ಓಡಿ ಹೋಗುತ್ತಿಲ್ಲ. ಅವರಿಗೆ ಬೇಕಾದ ವಿಷಯದಲ್ಲಿ ಅವರು ನಮ್ಮ ಜೊತೆ ಮಾತನಾಡಬಹುದಿತ್ತು. ಆದರೆ ಇಷ್ಟು ವರ್ಷ ಅವರು ಏನನ್ನೂ ಮಾಡಲಿಲ್ಲ ಮತ್ತು ಪ್ರಕರಣವು ಮುಂದಕ್ಕೆ ಹೋಗಲಿಲ್ಲ ಎಂದು ಶ್ವೇತಾ ಭಟ್ ಆಂಗ್ಲ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಂಜೀವ್ ಭಟ್ 1996ರಲ್ಲಿ ಬನಸ್ಕಾಂತದಲ್ಲಿ ಪೊಲೀಸ್ ವರಿಷ್ಟಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಮಾದಕದ್ರವ್ಯ ಪ್ರಕರಣದಲ್ಲಿ ಸಿಐಡಿ ಅವರನ್ನು ಬಂಧಿಸಿತ್ತು. ಆ ಸಮಯದಲ್ಲಿ ಸ್ಥಳೀಯ ಕ್ರೈಂ ಬ್ರಾಂಚ್‌ನ ಪೊಲೀಸ್ ನಿರೀಕ್ಷಕರಾಗಿದ್ದು ಐ.ಬಿ ವ್ಯಾಸ ಅವರನ್ನೂ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಗುಜರಾತ್ ಉಚ್ಚ ನ್ಯಾಯಾಲಯ ಸೂಚಿಸಿದ ಐದು ತಿಂಗಳ ನಂತರ ಭಟ್‌ರನ್ನು ಬಂಧಿಸಲಾಗಿತ್ತು.