×
Ad

ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ: ನ.3 ರಂದು 8 ವಿಧಾನಸಭಾ ಕ್ಷೇತ್ರದಲ್ಲಿ ಧರಣಿ

Update: 2018-10-30 20:04 IST

ಪುತ್ತೂರು, ಅ. 30: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಕಾಡುತ್ತಿದ್ದು, ಜಿಲ್ಲಾಧಿಕಾರಿಗಳು ಇದಕ್ಕೊಂದು ಶಾಶ್ವತ ಪರಿಹಾರ ನೀಡದಿರುವ ಹಿನ್ನಲೆಯಲ್ಲಿ ನ. 3ರಂದು ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ ತಾಲೂಕು ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಬೆಳಗ್ಗೆ 10ರಿಂದ ಸಂಜೆ 5 ರ ತನಕ ಧರಣಿ ಸತ್ಯಾಗ್ರಹ ನಡೆಯಲಿದ್ದು, ಅಲ್ಲಿಯೂ ಪರಿಹಾರ ಸಿಗದಿದ್ದಲ್ಲಿ ವಿಧಾನಸಭೆಗೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಮರಳು ಸಮಸ್ಯೆಯಿಂದ ಕೂಲಿ ಕಾರ್ಮಿಕನಿಂದ ಹಿಡಿದು ಕಟ್ಟಡದ ಮಾಲೀಕನ ವರೆಗೆ ತೊಂದರೆ ಅನುಭವಿಸುವಂತಾಗಿದೆ. ನಾನ್ ಸಿಆರ್‍ಝೆಡ್ ನಲ್ಲಿ ಇದುವರೆಗೆ ಮರಳು ತೆಗೆಯಲು ಪರವಾನಿಗೆ ನೀಡಿಲ್ಲ. ಇದರ ಹಿಂದೆ ಸಿಆರ್‍ಝೆಡ್ ಮರಳು ಮಾಫಿಯಾ ಹಾಗೂ ಎಂ. ಸ್ಯಾಂಡ್ ಮರಳು ಮಾಫಿಯಾದ ಕೈವಾಡ ಇದೆ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ 15 ದಿನಗಳೊಳಗೆ ಶಾಸಕರನ್ನು ಕರೆದು ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರು ಸೂಚನೆ ನೀಡಿ ಈಗಾಗಲೇ 20 ದಿನಗಳು ಕಳೆದಿವೆ. ಆದರೆ ಇದುವರೆಗೆ ಜಿಲ್ಲಾಧಿಕಾರಿಗಳು ಈ ಸಭೆಯನ್ನು ಕರೆದಿಲ್ಲ. ಜನಸಾಮನ್ಯರ ಬದುಕಿಗೆ ಅತೀ ಅಗತ್ಯವಾಗಿರುವ ಮರಳನ್ನು ದಂಧೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದವರು ಹೇಳಿದರು.

ಈ ಬಾರಿ ಅತಿವೃಷ್ಟಿಯ ಕಾರಣದಿಂದ ಹೆಚ್ಚು ಮರಳು ಜಿಲ್ಲೆಯಲ್ಲಿ ಸೃಷ್ಠಿಯಾಗಿದೆ. ಈ ಮರಳನ್ನು ನದಿಗಳಿಂದ ತೆಗೆಯದಿದ್ದರೆ ನದಿಗಳಿಗೂ ಅಪಾಯವಿದೆ. ಪ್ರಾಕೃತಿಕವಾಗಿ ಯತೇಶ್ಚವಾಗಿರುವ ಮರಳು ಜನತೆಯ ಉಪಯೋಗಕ್ಕೆ ಸಿಗಬೇಕು. ಅದಕ್ಕಾಗಿ ನಾನ್ ಸಿಆರ್‍ಝೆಡ್ ವ್ಯಾಪ್ತಿಯಲ್ಲಿ ಹಿಂದಿನ ಪದ್ಧತಿಯಲ್ಲಿ ತಕ್ಷಣ ಮರಳುಗಾರಿಕೆಗೆ ಪರವಾನಿಗೆ ನೀಡಬೇಕು. ಕರಾವಳಿ ಜಿಲ್ಲೆಗೆ ಪ್ರತ್ಯೇಕ 'ಮರಳು ನೀತಿ'ಯನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಆಶ್ರಯ ಮನೆ ಅಂಬೇಡ್ಕರ್ ವಸತಿ, ಬಸವ ವಸತಿ ಮೊದಲಾದ ಸರ್ಕಾರಿ ಸೌಲಭ್ಯಗಳ ಮನೆಗಳಿಗೆ ಬಡ ಜನತೆ ರಿಕ್ಷಾ, ಪಿಕಪ್ ಹಾಗೂ ಜೀಪುಗಳಲ್ಲಿ ಮರಳು ಸಾಗಾಟ ಮಾಡಿದರೆ ಅಂತವರ ಮೇಲೆ ಪೊಲೀಸ್ ಇಲಾಖೆ ದೌರ್ಜನ್ಯ ನಡೆಸುತ್ತಿದೆ. ಬಡಪಾಯಿ ಜನತೆಯನ್ನು ಪೊಲೀಸರು ಸುಲಿಗೆ ಮಾಡುತ್ತಿದ್ದಾರೆ. ಗಂಧವನ್ನಾದರೂ ಕೊಂಡುಹೋಗಬಹುದು. ಆದರೆ ಮರಳು ಸಾಗಾಟ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಜನತೆಯಿಂದ ವ್ಯಕ್ತವಾಗುತ್ತಿದೆ. ಪೊಲೀಸರು ಹಾಗೂ ಅಧಿಕಾರಿಗಳು ಈ ಶೋಷಣೆಯನ್ನು ತಕ್ಷಣ ನಿಲ್ಲಿಸಬೇಕು. ಮರಳು ಪ್ರಾಕೃತಿಕವಾಗಿ ದೊರೆಯುವ ವಸ್ತು. ಇದಕ್ಕೆ ಯಾವುದೇ ತೊಂದರೆ ಮಾಡಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್ ಮತ್ತು ಬಿಜೆಪಿ ವಕ್ತಾರ ಆರ್.ಸಿ ನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News