ಬಿ.ಸಿ.ರೋಡ್ ರಸ್ತೆ ಅಗೆದು ಸಂಚಾರಕ್ಕೆ ಅಡಚಣೆ: ಶಾಸಕ ತರಾಟೆ
ಬಂಟ್ವಾಳ, ಅ. 30: ಬಿ.ಸಿ.ರೋಡಿನ ಕಾಂಕ್ರಿಟ್ ಸರ್ವೀಸ್ ರಸ್ತೆಯನ್ನು ಅಗೆದು ಸಂಚಾರಕ್ಕೆ ಅಡಚಣೆಯನ್ನುಂಟು ಮಾಡಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಅಧಿಕಾರಿಗಳನ್ನು ಶಾಸಕ ರಾಜೇಶ್ ನಾಯಕ್ ಅವರು ಮಂಗಳವಾರ ತರಾಟೆಗೆ ತೆಗೆದುಕೊಂಡದಲ್ಲದೆ, ಮರು ಕಾಂಕ್ರಿಟಿಕರಣ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡಿನ ವಿವೇಕನಗರದ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ನೀರು ಪೋಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಪುರಸಭಾ ಇಲಾಖೆಯ ಕುಡಿಯುವ ನೀರು ಸರಬರಾಜು ಮಂಡಳಿಯ ವತಿಯಿಂದ ಇತ್ತೀಚೆಗೆ ಕಾಂಕ್ರಿಟ್ ಮಾಡಿದ ಸರ್ವೀಸ್ ರಸ್ತೆಯನ್ನು ಅಗೆದು ಹಾಕಲಾಗಿದೆ. ಆದರೆ, ಇದುವರೆಗೂ ನೀರಿನ ಪೈಪ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಬೆಳಿಗ್ಗೆಯಿಂದಲೇ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗುತಿದೆ ಎಂದು ವಾಹನ ಸವಾರರು ಆರೋಪಿಸಿದ್ದರು.
ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಬಳಿಕ ಪುರಸಭಾ ಇಂಜಿನಿಯರ್ ಹಾಗೂ ಕುಡಿಯುವ ನೀರಿನ ಯೋಜನೆಯ ಅಧಿಕಾರಿಗಳಿಗೆ ತುರ್ತಾಗಿ ಕೆಲಸ ಮಾಡಿ ಮುಗಿಸುವಂತೆ ಸೂಚನೆ ನೀಡಿದರು. ಈ ಹೊಂಡಕ್ಕೆ ರಾತ್ರಿ ಹೊತ್ತಲ್ಲಿ ದ್ವಿಚಕ್ರ ವಾಹನ ಸವಾರರು ತಪ್ಪಿ ಬಿದ್ದು ಪ್ರಾಣಾಪಾಯವಾಗುವ ಸಂಭವವಿದೆ. ಹಾಗಾಗಿ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನು ಪರಿಹರಿಸಲು ಸೂಚಿಸಿದರು.