ಪತನಗೊಂಡ ವಿಮಾನಕ್ಕಾಗಿ ಮುಳುಗುಗಾರರಿಂದ ಶೋಧ ಮುಂದುವರಿಕೆ

Update: 2018-10-30 15:26 GMT

ಜಕಾರ್ತ (ಇಂಡೋನೇಶ್ಯ), ಅ. 30: ಇಂಡೋನೇಶ್ಯದ ಜಾವಾ ಸಮುದ್ರಕ್ಕೆ ಅಪ್ಪಳಿಸಿದ ಲಯನ್ ಏರ್ ಸಂಸ್ಥೆಗೆ ಸೇರಿದ ‘ಬೋಯಿಂಗ್ 737 ಮ್ಯಾಕ್ಸ್ 8’ ವಿಮಾನದ ಶೋಧ ಕಾರ್ಯಾಚರಣೆಯನ್ನು ಮುಳುಗುಗಾರರು ಮಂಗಳವಾರ ಮುಂದುವರಿಸಿದ್ದಾರೆ.

189 ಜನರನ್ನು ಹೊತ್ತು ಇಂಡೋನೇಶ್ಯ ರಾಜಧಾನಿ ಜಕಾರ್ತದಿಂದ ಪಂಗ್‌ಕಲ್ ಪಿನಂಗ್ ಪಟ್ಟಣಕ್ಕೆ ಹಾರುತ್ತಿದ್ದ ವಿಮಾನವು ಸೋಮವಾರ ಮುಂಜಾನೆ ಸಮುದ್ರದಲ್ಲಿ ಪತನಗೊಂಡಿರುವುದನ್ನು ಸ್ಮರಿಸಬಹುದಾಗಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 189 ಮಂದಿ ಮೃತಪಟ್ಟಿರಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘‘ಇಂದು ನಾವು ವಿಮಾನದ ಅವಶೇಷಗಳನ್ನು ಪತ್ತೆಹಚ್ಚುವ ನಿರೀಕ್ಷೆಯಿದೆ’’ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿಯ ಮುಖ್ಯಸ್ಥ ಸೋರ್ಜಾಂಟೊ ಜಜೊನೊ ಹೇಳಿದರು.

ನೀರಿನಡಿಯಲ್ಲಿ ಸಂಕೇತಗಳನ್ನು ಪತ್ತೆಹಚ್ಚುವ ಉಪಕರಣಗಳನ್ನು ಶೋಧ ಕಾರ್ಯದಲ್ಲಿ ಬಳಸಲಾಗುತ್ತಿದೆ ಎಂದರು.

ವಿಮಾನದ ಕಾಕ್‌ಪಿಟ್ ಧ್ವನಿ ಮುದ್ರಣಗಳು ಮತ್ತು ಫ್ಲೈಟ್ ಡಾಟಾ ರೆಕಾರ್ಡರ್‌ಗಳನ್ನು ಪತ್ತೆಹಚ್ಚುವುದು ಮೊದಲ ಆದ್ಯತೆಯಾಗಿದೆ ಎಂದು ಅವರು ನುಡಿದರು. ಈ ಉಪಕರಣಗಳ ಮೂಲಕ ವಿಮಾನ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಬಹುದಾಗಿದೆ.

ಸೋಮವಾರ ರಾತ್ರಿ ಮುಳುಗುಗಾರರು ಶೋಧವನ್ನು ನಿಲ್ಲಿಸಿದರೂ, ಸೋನಾರ್ ಹಡಗುಗಳು ಮತ್ತು ನೀರಿನಡಿ ಕಾರ್ಯನಿರ್ವಹಿಸುವ ಡ್ರೋನ್‌ಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದವು ಎಂದು ಅಧಿಕಾರಿಗಳು ಹೇಳಿದರು.

ಹೆಚ್ಚಿನ ಪ್ರಯಾಣಿಕರ ಶವಗಳು ವಿಮಾನದ ಅವಶೇಷದ ಒಳಗೆ ಸಿಕ್ಕಿಕೊಂಡಿರಬೇಕೆಂದು ಶಂಕಿಸಲಾಗಿದೆ.

24 ಚೀಲ ದೇಹ ಭಾಗಗಳು ಪತ್ತೆ

ಜಾವಾ ಸಮುದ್ರದಲ್ಲಿ ಪತನಗೊಂಡ ವಿಮಾನದಿಂದ 24 ಚೀಲ ಮಾನವದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಂಡೋನೇಶ್ಯದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ಚೀಲಗಳನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಮೃತದೇಹಗಳನ್ನು ಗುರುತಿಸುವುದಕ್ಕಾಗಿ ಪ್ರಯಾಣಿಕರ 132 ಕುಟುಂಬ ಸದಸ್ಯರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಆದರೆ, ಮೃತದೇಹಗಳನ್ನು ಗುರುತಿಸುವುದು ಕಷ್ಟಸಾಧ್ಯವಾಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಯಾಕೆಂದರೆ, ಒಂದು ಚೀಲದಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ದೇಹಗಳ ಭಾಗಗಳು ಇರಬಹುದು ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News