ಕುದ್ರೋಳಿ ಭಯೋತ್ಪಾದನಾ ಕೇಂದ್ರವೆಂದ ಜಗದೀಶ ಶೇಣವ ವಿರುದ್ಧ ಕೇಸು ದಾಖಲು
Update: 2018-10-30 21:52 IST
ಮಂಗಳೂರು, ಅ. 30: ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ‘ಕುದ್ರೋಳಿ ಭಯೋತ್ಪಾದನಾ ಕೇಂದ್ರ’ ಎಂದು ಸಂಘಪರಿವಾರದ ಜಗದೀಶ ಶೇಣವ ಹೇಳಿಕೆ ನೀಡಿದಾಗ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ನಾಯಕರು, ಹಿರಿಯರು ಸೇರಿ ಶೇಣವ ವಿರುದ್ಧ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಿ ಮಂಗಳೂರು ಕಮಿಷನರ್ ಭೇಟಿ ಮಾಡಿ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಮನವಿ ಸಲ್ಲಿಸಲಾಗಿತ್ತು.
ಮನವಿಯ ಪ್ರತಿಯನ್ನು ರಾಜ್ಯ ಪಾಲರು, ಮುಖ್ಯಮಂತ್ರಿ ಸಮೇತ ವಿವಿಧ ಗಣ್ಯರಿಗೆ ಕಳುಸಿಕೊಡಲಾಗಿತ್ತು. ಇದರ ಫಲಶ್ರುತಿ ಎಂಬಂತೆ ಇದೀಗ ಬರ್ಕೆ ಪೊಲೀಸ್ ಠಾಣೆಯಲ್ಲಿ ಶೇಣವ ವಿರುದ್ಧ ಪ್ರಕರಣ ದಾಖಲಾಗಿದೆ. ಬರ್ಕೆ ಠಾಣೆಗೂ ಭೇಟಿ ನೀಡಿದ ಮುಸ್ಲಿಂ ಸೌಹಾರ್ದ ವೇದಿಕೆ ನಾಯಕರು ಶೇಣವ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಠಾಣಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.