ಅರಣ್ಯ ಇಲಾಖೆ ದಿನಗೂಲಿ ನೌಕರರಿಂದ ಮುಂದುವರಿದ ಧರಣಿ

Update: 2018-10-30 16:54 GMT

ಕಾರ್ಕಳ, ಅ.30: ಮಂಗಳೂರು ವೃತ್ತದ ಕಾರ್ಕಳ ವನ್ಯಜೀವಿ ವಿಭಾಗದಲ್ಲಿ ಕಳೆದ 20-30 ವರ್ಷಗಳಿಂದ ಕೆಲಸ ನಿವರ್ಹಿಸುತ್ತಿರುವ ದಿನಗೂಲಿ ಪಿಸಿಪಿ/ಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ದಿಂದ ಆರಂಭಗೊಂಡ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿಯು ಎರಡನೆ ದಿನವಾದ ಮಂಗಳವಾರವೂ ಮುಂದುವರಿದಿದೆ.

ಕಾರ್ಕಳ ವನ್ಯಜೀವಿ ವಿಭಾಗದ ಕಚೇರಿ ಎದುರು ನಡೆಯುತ್ತಿರುವ ಧರಣಿ ಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜ್, ವನ್ಯಜೀವಿ ಭಾಗದ ನೌಕರರು ಹೆಚ್ಚುವರಿ ವೇತನ ಪಡೆಯಲು ಸಾಧ್ಯವಾಗಿಲ್ಲ. ಆದೇಶ ಜಾರಿಯಾಗಿ 90ವರ್ಷಗಳಾದರೂ ಈ ಭಾಗದ ನೌಕರರಿಗೆ ಸೌಲಭ್ಯ ದೊರೆತಿಲ್ಲ. ಇದು ಕಾಮಿಕರ್ ವಿರೋಧಿ ನೀತಿ ಎಂದು ದೂರಿದರು.

ಪ್ರಮುಖ ಬೇಡಿಕೆಗಳು: ಪ್ರತಿಯೊಬ್ಬ ನೌಕರನಿಗೂ ಸಮವಸ್ತ್ರ, ಗುರುತಿನ ಚೀಟಿ, ವಿಮೆ ಸೌಲಭ್ಯ ನೀಡಬೇಕು. ನೌಕರರನ್ನು ದೂರದ ಸ್ಥಳಗಳಿಗೆ ವರ್ಗಾ ಯಿಸುವುದನ್ನು ತಕ್ಷಣ ನಿಲ್ಲಿಸಬೇಕು. ಸರಕಾರದ ಆದೇಶಕ್ಕೆ ವಿರುದ್ದವಾಗಿ ಇಲಾಖೆ ಗುತ್ತಿಗೆ ಪದ್ದತಿ ಜಾರಿಗೊಳಿಸಿದೆ. ಆದರೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಿದ ಈ ಕ್ರಮ ಕೈಬಿಡಬೇಕು.

2006 ಅ.10ಕ್ಕೆ 10ವರ್ಷಗಳ ಸೇವೆ ಪೂರೈಸಿದ ನೌಕರರನ್ನು ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ದಿ ಅಡಿ ಸಕ್ರಮಗೊಳಿಸಬೇಕು. ಇಲಾಖೆಯಲ್ಲಿ 20 ವರ್ಷಗಳಿಗೂ ಹೆಚ್ಚಿನ ಸೇವೆ ಸಲ್ಲಿಸಿ ಮುಂದುವರೆಯುತ್ತಿರುವ ನೌಕರರಿಗೆ ಸರಕಾರದ ಆದೇಶದಂತೆ 2009ರ ಎ.1 ಹಾಗೂ 2012ರ ಎ.1ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ವೇತನ 1000+1000 ನೀಡಬೇಕು.

ಸೋಮವಾರದಿಂದ ಆರಂಭಗೊಂಡ ಧರಣಿಯು ಎರಡನೆ ದಿನವೂ ಮುಂದುವರೆದಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡುವ ಪ್ರಶ್ನೆಯೇ ಇಲ್ಲ. ಆದರೆ ಧರಣಿ ನಡೆಯುವ ಸ್ಥಳಕ್ಕೆ ಈವರೆಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಆಲಿಸಿಲ್ಲ ಎಂದು ಧರಣಿ ನಿರತರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News