ನೇಣುಬಿಗಿದು ಯುವಕ ಆತ್ಮಹತ್ಯೆ
ಮಂಗಳೂರು, ಅ.30: ಹೊಟ್ಟೆನೋವಿನಿಂದ ಬಳಲುತ್ತಿದ್ದ ಬೊಂದೇಲ್ ಅಮೃತಕೋಡಿ ನಿವಾಸಿ ವಿನಯ್ ಲೋಸ್ಟನ್ ಲೋಬೊ (22) ಎಂಬವರು ನೇಣುಬಿಗಿದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲೋಸ್ಟನ್ ಅವರು ಬೈಕಂಪಾಡಿಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಹಲವು ಸಮಯಗಳಿಂದ ಹೊಟ್ಟೆನೋವು ಕಾಡುತ್ತಿತ್ತು. ವರ್ಷದ ಹಿಂದೆ ವೈದ್ಯರಲ್ಲಿ ಪರೀಕ್ಷೆ ಮಾಡಿ ಮದ್ದು ತೆಗೆದುಕೊಂಡಿದ್ದರೂ, ಗುಣಮುಖವಾಗದೆ ಹೊಟ್ಟೆನೋವು ಕಾಡುತ್ತಿತ್ತು ಎನ್ನಲಾಗಿದೆ.
ಮಂಗಳವಾರ ಬೆಳಗ್ಗೆ 8ಗಂಟೆಗೆ ಲೋಸ್ಟನ್ ಅವರ ತಂದೆ-ತಾಯಿ ಕೆಲಸಕ್ಕೆ ಹೊರಟು ಹೋಗಿದ್ದಾರೆ. 9 ಗಂಟೆಗೆ ಕೆಲಸಕ್ಕೆ ತೆರಳಬೇಕಿದ್ದ ಲೋಸ್ಟನ್ ಮತ್ತೆ ಹೊಟ್ಟೆನೋವಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಬಾಕಿಯಾಗಿದ್ದರು. ಪದೇಪದೇ ಹೊಟ್ಟೆನೋವಿನಿಂದ ಬಳಲುತ್ತಿದ್ದ ಇವರು ಮಂಗಳವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ತಂದೆ-ತಾಯಿ ಸಂಜೆ ಮನೆಗೆ ಬಂದಾಗ ಮನೆಯ ಬಾಗಿಲು ಅರ್ಧ ತೆರೆದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಕುರಿತು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.