ಯೋಜನೆಗಳ ಅನುಷ್ಠಾನ, ಅಭಿವೃದ್ಧಿಯ ಚಿತ್ರಣ ನೀಡಲು ಪೊನ್ನುರಾಜ್ ಸೂಚನೆ
ಮಂಗಳೂರು, ಅ.30: ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ವೇಳೆ ಕೇವಲ ಅಂಕಿ ಅಂಶಗಳ ಮೂಲಕ ಗುರಿ-ಸಾಧನೆ ಮಾಹಿತಿಗಿಂತ ಮುಖ್ಯವಾಗಿ ಯೋಜನೆಗಳಿಂದ ಜನರಿಗಾದ ಲಾಭಗಳ ಸಮಗ್ರ ಮಾಹಿತಿ ನೀಡಲು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಸೂಚಿಸಿದರು.
ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಪೊನ್ನುರಾಜ್ ಜಿಪಂ ಇಂಜಿನಿಯರಿಂಗ್ ವಿಭಾಗ ಕೈಗೆತ್ತಿಕೊಂಡಿರುವ ‘ನಮ್ಮ ಗ್ರಾಮ ನಮ್ಮ ರಸ್ತೆ’ ಮತ್ತು ಬಹುಗ್ರಾಮ ಕುಡಿಯುವ ನೀರಿನಂತಹ ಯೋಜನೆಗಳಿಂದ ಜನರಿಗಾದ ಅನುಕೂಲತೆಯ ಬಗ್ಗೆ ವಿಭಾಗಕ್ಕೆ ಮಾಹಿತಿ ಇರಬೇಕು. ಯೋಜನೆಗಳು ನಿರರ್ಥಕವಾಗದಂತೆ, ಭವಿಷ್ಯದಲ್ಲಿ ನಿಷ್ಫಲವಾಗದಂತೆ ಅನುಷ್ಠಾನಕ್ಕೆ ತರಬೇಕು ಎಂದರು.
ಪ್ರಗತಿ ಪರಿಶೀಲನೆ ಸಂದರ್ಭ ಸಾಧನೆಗಳನ್ನು ಪುಸ್ತಕಗಳ ನೆರವಿಲ್ಲದೆ ಹೇಳುವಂತಹ ಅಧಿಕಾರಿಗಳಿರಬೇಕು. ದ.ಕ.ಜಿಲ್ಲೆಯಲ್ಲಿ ಅಧಿಕಾರಿಗಳು ಇನ್ನಷ್ಟು ವೇಗದಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದ ಪೊನ್ನುರಾಜ್, ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳೆಂದರೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ವರದಿ ನೀಡಬೇಕೇ ವಿನಃ ಸ್ಥಳದಲ್ಲೇ ಕುಳಿತು ವರದಿ ನೀಡುವವರಾಗಬಾರದು ಎಂದರು. ಜಿಲ್ಲೆಯಲ್ಲಿ ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 10 ಗ್ರಾಮಗಳ 60 ಜನವಸತಿ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಪಿಆರ್‌ಇಡಿ ಇಂಜಿನಿಯರ್ ಮಾಹಿತಿ ನೀಡಿದರು. ಈ ಯೋಜನೆಯ ಸುಸ್ಥಿರ ಅಭಿವೃದ್ಧಿಗೆ ಅಳವಡಿಸಲಾಗಿರುವ ಕ್ರಿಯಾ ಯೋಜನೆಯ ಚಿತ್ರಣ ನೀಡಿ ಎಂದ ಪೊನ್ನುರಾಜ್, ಯೋಜನೆ ಅನುಷ್ಠಾನದಷ್ಟೆ ಮುಖ್ಯ ನಿರಂತರ ಸದುಪಯೋಗವಾಗಿದೆ. ಈ ಬಗ್ಗೆ ಇಂಜಿನಿಯರ್ ಕಾಳಜಿ ವಹಿಸಬೇಕು ಎಂದರು.
ಜಿಪಂ ಸಿಇಒ ಡಾ ಸೆಲ್ವಮಣಿ ಆರ್. ನರೇಗಾದಡಿ ಕೈಗೊಂಡ ಕಾಮಗಾರಿ, ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೆನ್ಲಾಕ್ ಆಸ್ಪತ್ರೆಯ ಸಮಸ್ಯೆಯ ಬಗ್ಗೆ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಗಮನಸೆಳೆದರು. ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರ ಬೇಡಿಕೆಯ ಬಗ್ಗೆ ಅಪರ ಜಿಲ್ಲಾಧಿಕಾರಿ ಕುಮಾರ್ ವಿವರಿಸಿದರು.
ನಗರಾಭಿವೃದ್ಧಿ, ನಗರೋತ್ಥಾನ, ಸ್ವಚ್ಛ ಭಾರತ್ ಮಿಷನ್, ಆಹಾರ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಇಲಾಖೆ, ಸಹಕಾರಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಕೌಶಲ್ಯಾಭಿವೃದ್ಧಿ, ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.