ನ. 15ರಂದು ಆಳ್ವಾಸ್ ವಿದ್ಯಾರ್ಥಿಸಿರಿ 2018: ಉದ್ಘಾಟನೆಗೆ ಬಹುಭಾಷಾ ತಾರೆ ವಿನಯ ಪ್ರಸಾದ್
ಮೂಡುಬಿದಿರೆ, ಅ. 30: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಆಳ್ವಾಸ್ ವಿದ್ಯಾರ್ಥಿ ಸಿರಿ 2018ರ ಉದ್ಘಾಟನೆಗೆ ಬಹುಭಾಷಾ ತಾರೆ, ಕಿರುತೆರೆ- ಸಿನೆಮಾ ಪ್ರಸಿದ್ಧ ನಟಿ, ನಿರ್ದೇಶಕಿ ವಿನಯಾ ಪ್ರಸಾದ್ ಆಗಮಿಸಲಿದ್ದಾರೆ.
ಸಮ್ಮೇಳನವು ನ. 15 ರಂದು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆ, ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ನಡೆಯಲಿದೆ. ಕಾಸರಗೋಡಿನ ಚಿನ್ಮಯ ವಿದ್ಯಾಲಯದ ಒಂಬತ್ತನೇ ತರಗತಿ ವಿದ್ಯಾರ್ಥಿ ಬಹುಮುಖ ಪ್ರತಿಭೆ ಸನ್ನಿಧಿ ಟಿ ರೈ ಪೆರ್ಲ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಉದ್ಘಾಟನಾ ಸಮಾರಂಭವು ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ಸಲ್ಲಿಸಿದವರಿಗೆ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಆಳ್ವಾಸ್ ವಿದ್ಯಾರ್ಥಿಗಳಾದ ಚಿನ್ಮಯಿ ರಾಜೇಶ್ ತುಮಕೂರು ಇವರ 'ಅಂಬರದ ಕಂಬನಿ' ಕವನ ಸಂಕಲನ, ಅಪೂರ್ವ ಹೆಗ್ಡೆ ಇವರ `ಮೋಡಗಳು' ಕೃತಿ ಅನಾವರಣಗೊಳ್ಳಲಿದೆ.
ಸಮ್ಮೇಳನದಲ್ಲಿ ಬೆಂಡರವಾಡಿ, ಬೇಂದ್ರೆ ನೆನಪು, ವಿಶೇಷ ಉಪನ್ಯಾಸಗಳು
ವಿದ್ಯಾರ್ಥಿಸಿರಿಯಲ್ಲಿ ಮಕ್ಕಳ ಸಾಹಿತ್ಯದ ಪರಿಚಾರಕ ದಿ.ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರ ನೆನಪು ಕಾರ್ಯಕ್ರಮವನ್ನು ಪುತ್ತೂರು ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ. ಧಾರವಾಡದ ಅನಂತ ದೇಶಪಾಂಡೆಯವರು ಬೇಂದ್ರೆ ದರ್ಶನ ಎಂಬ ಕಾರ್ಯಕ್ರಮವನ್ನು ಮಾಡಲಿದ್ದಾರೆ.
ದಿನಚರಿ : ಹಿಂದು- ಮುಂದು ವಿಷಯದ ಕುರಿತು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾಪ್ರಭು, ಅಡುಗೆ ಉಡುಗೆ ತೊಡುಗೆ ಎಂಬ ವಿಷಯದ ಕುರಿತು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಭಾರತಿ ಶಿವಾನಂದ ನಾಯಕ್ ಬೆಳಗಾವಿ, ಬಹುತ್ವದ ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಕುರಿತು ವಳಕಾಡು ಸರಕಾರಿ ಪಪೂ ಕಾಲೇಜಿನ ನಚಿಕೇತ ನಾಯಕ್ ಅಲೆವೂರು ಉಪನ್ಯಾಸ ನೀಡಲಿದ್ದಾರೆ.
ಸಮ್ಮೇಳನದ ಕವಿಗೋಷ್ಠಿಯಲ್ಲಿ ಎಸ್‍ಡಿಎಂ ಪದವಿಪೂರ್ವ ಕಾಲೇಜಿನ ಭಾರ್ಗವಿ ಶಬರಾಯ ಅಧ್ಯಕ್ಷತೆ ವಹಿಸಲಿದ್ದು ಕವಿಗಳಾಗಿ ಮಂಗಳೂರಿನ ಕೆನರಾ ಪಿಯು ಕಾಲೇಜಿನ ಶ್ರೀಲಕ್ಷ್ಮಿ ಎಂ, ಉಡುಪಿ ಎರ್ಮಾಳು ಸರಕಾರಿ ಪಿಯು ಕಾಲೇಜಿನ ದೀಪಾಲಿ, ಪುತ್ತೂರು ಸುದಾನ ವಸತಿ ಶಾಲೆಯ ಅಭಿಜ್ಞಾ ಕೆ.ಸಿ, ಆಳ್ವಾಸ್ ಪಿಯು ಕಾಲೇಜಿನ ಚಿನ್ಮಯಿ ರಾಜೇಶ್, ತುಮಕೂರು ಹಾಗೂ ಶಿರಸಿಯ ಶ್ರೀಮಾರಿಕಾಂಬ ಸರ್ಕಾರಿ ಪಿಯು ಕಾಲೇಜಿನ ಗಾಯತ್ರಿ ಡಿ ಹೆಗಡೆ ಭಾಗವಹಿಸಿದ್ದಾರೆ.
ವಿದ್ಯಾರ್ಥಿ ಸಿರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸುವಂತೆ ಶಿಕ್ಷಕರು, ಹೆತ್ತವರು ಪ್ರೋತ್ಸಾಹಿಸಬೇಕೆಂದು ಡಾ.ಎಂ ಮೋಹನ ಆಳ್ವರು ತಿಳಿಸಿದ್ದಾರೆ.
ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು. ಪ್ರತಿನಿಧಿಗಳಾಗಬಯಸುವ ವಿದ್ಯಾರ್ಥಿಗಳು ಅಥವಾ ತಂಡವಾಗಿ ಆಗಮಿಸುವ ಶಿಕ್ಷಣ ಸಂಸ್ಥೆಯವರು 'ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ- 574227' ವಿಳಾಸಕ್ಕೆ ಪತ್ರಮುಖೇನ ತಿಳಿಸಬಹುದಾಗಿದೆ. ವಿವರಗಳಿಗೆ 9481326858 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.