×
Ad

ಕುದ್ರೋಳಿ ವಧಾಗೃಹ ಅಭಿವೃದ್ಧಿ ಪ್ರಸ್ತಾಪ: ಮನಪಾ ಸಾಮಾನ್ಯ ಸಭೆಯಲ್ಲಿ ಸದಸ್ಯರ ಗದ್ದಲ- ಕೋಲಾಹಲ !

Update: 2018-10-31 18:56 IST

ಮಂಗಳೂರು, ಅ. 31: ಕುದ್ರೋಳಿಯ ವಧಾಗೃಹವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ದಿ ಪಡಿಸುವ ಪ್ರಸ್ತಾಪವು ಮಂಗಳೂರು ಮಹಾ ನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಯ ಜತೆಗೆ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.

ಮೇಯರ್ ಭಾಸ್ಕರ್ ಕೆ. ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವನ್ನು ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಸಮರ್ಥಿಸಿದರೆ, ಪ್ರತಿಪಕ್ಷ ಬಿಜೆಪಿ ಸದಸ್ಯರು ವಿರೋಧಿಸಿದರು.

ದೀರ್ಘ ಹೊತ್ತಿನ ಚರ್ಚೆ, ವಿರೋಧದ ಬಳಿಕ ಮೇಯರ್ ಭಾಸ್ಕರ್ ಕೆ. ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ವಧಾಗೃಹಅಭಿವೃದ್ದಿ ಪಡಿಸುವುದು ಈಗಾಗಲೇ ನಿಗದಿಯಾಗಿದೆ. ತಾತ್ಕಾಲಿಕವಾಗಿ ಅಭಿವೃದ್ದಿ ಪಡಿಸುವ ಅಗತ್ಯವಿದೆ. ಮುಂದೆ ಸೂಕ್ತ ಜಮೀನು ಲಭ್ಯವಾದರೆ ಸ್ಥಳಾಂತರ ಮಾಡಲಾಗುವುದು ಎಂದರು. ಆದರೆ ಈ ಸಂದರ್ಭದಲ್ಲಿ ಮತ್ತೆ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆದು ಕೆಲಹೊತ್ತು ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ‘ ಹೈಕೋರ್ಟ್ ಆದೇಶದನ್ವಯ ನಗರದ ಒಳಗೆ ವಧಾಗೃಹ ಇರುವಂತಿಲ್ಲ. ಕುದ್ರೋಳಿ ವಧಾಗೃಹ ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ್ದು, ಇಂದಿಗೂ ಅನುಮತಿ ನೀಡಿಲ್ಲ. ವಧಾಗೃಹಕ್ಕೆ ವಿರೋಧವಿಲ್ಲ. ಆದರೆ ಅಕ್ರಮವಾಗಿ ನಡೆಯುತ್ತಿರುವ ವಧಾಗೃಹಕ್ಕೆ ಉಸ್ತುವಾರಿ ಸಚಿವರು ಆಸಕ್ತಿ ವಹಿಸಿ 15 ಕೋಟಿ ರೂ.ನೀಡುವುದಕ್ಕೆ ವಿರೋಧವಿದೆ.
ಈಗಾಗಲೇ ನಗರದ ಹೊರಗೆ ವಧಾಗೃಹ ನಿರ್ಮಿಸಲು 10 ಲಕ್ಷ ರೂ. ಖರ್ಚು ಮಾಡಿ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲಾಗಿದೆ. ಆದ್ದರಿಂದ ಅದನ್ನು ಕುದ್ರೋಳಿಯಿಂದ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

ಧಾರ್ಮಿಕ ಕ್ಷೇತ್ರವಾದ ಕುದ್ರೋಳಿ ದೇವಸ್ಥಾನದ ಬಳಿ ಇರುವ ವಧಾಗೃಹವನ್ನು ಸ್ಥಳಾಂತರಿಸುವುದು ಅಗತ್ಯ ಎಂದು ರೂಪಾ.ಡಿ.ಬಂಗೇರ ಹೇಳಿದರು. ವಧಾಗೃಹದಲ್ಲಿ ಅಕ್ರಮವಾಗಿ ಹಸುಗಳನ್ನು ವಧೆ ಮಾಡುತ್ತಿರುವುದು ಮಾಹಿತಿ ಹಕ್ಕಿನಲ್ಲಿ ಪಡೆದ ವಿವರದಲ್ಲಿ ಬಹಿರಂಗವಾಗಿದೆ. ಇದಕ್ಕೆ ಯಾರು ಹೊಣೆ ಎಂದು ವಿಜಯಕುಮಾರ್ ಶೆಟ್ಟಿ ಪ್ರಶ್ನಿಸಿದರು.

ಕುದ್ರೋಳಿ ವಧಾಗೃಹದ ಅವ್ಯವಸ್ಥೆಯಿಂದ ತ್ಯಾಜ್ಯನೀರಿನ ಜತೆ ಪ್ರತಿದಿನ ಐದಾರು ಟ್ಯಾಂಕರ್‌ನಷ್ಟು ಜಾನುವಾರು ರಕ್ತ ಹರಿಯುತ್ತಿದೆ. ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಈ ವಧಾಗೃಹದ ಆಧುನೀಕರಣ ಅಗತ್ಯ ಎಂದು ಆಡಳಿತ ಪಕ್ಷದ ದೀಪಕ್ ಪೂಜಾರಿ ಹೇಳಿದರು. ಮಹಾಬಲ ಮಾರ್ಲ, ಶಶಿಧರ ಹೆಗ್ಡೆ ಸಮರ್ಥಿಸಿದರು.

ಸ್ಮಾರ್ಟ್ ಸಿಟಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದೆ. ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ನಿರ್ದೇಶಕರಾಗಿರುವ ಕೆಲವು ಅಧಿಕಾರಿಗಳು ಕೂಡಾ ನೇರ ವಾಗಿ ಬೋರ್ಡ್ ಮೀಟಿಂಗ್‌ನಲ್ಲಿ ಅನುಮತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಪ್ರತಿಪಕ್ಷದ ಸದಸ್ಯ ಪ್ರೇಮಾನಂದ ಶೆಟ್ಟಿ ಹೇಳಿದರು. ಇಲ್ಲಿ ಚರ್ಚೆ ನಡೆಸುವುದು ಅಪ್ರಸ್ತುತ. ಸಭೆಯಲ್ಲಿ ಯಾರೂ ವಿರೋಧಿಸಿಲ್ಲ. ದೃಢೀಕರಣ ಸಂದರ್ಭ ವಿರೋಧಿಸಿದ್ದರು ಎಂದು ಆಯುಕ್ತ ಮಹಮ್ಮದ್ ನಜೀರ್ ಹೇಳಿದರು.

ಆಯುಕ್ತರ ಉತ್ತರವನ್ನು ಆಕ್ಷೇಪಿಸಿದ ಬಿಜೆಪಿ ಸದಸ್ಯ ಪ್ರೇಮಾನಂದ ಶೆಟ್ಟಿ, ಚರ್ಚೆ ಅಪ್ರಸ್ತುತ ಎಂದು ಮೇಯರ್ ಹೇಳಲಿ. ಆಯುಕ್ತರಿಗೆ ಏು ಅಧಿಕಾರವಿದೆ ಎಂದು ಪ್ರಶ್ನಿಸಿದರು. ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ. ಸ್ಮಾರ್ಟ್ ಸಿಟಿಯ ಸಭೆಯ ದಾಖಲೆಗಳಲ್ಲಿ ನಮ್ಮ ವಿರೋಧ ಉಲ್ಲೇಖವಿದೆ. ಈ ಹಿಂದೆ ಕ್ಲಾಕ್ ಟವರ್‌ಗೆ ಸ್ಮಾರ್ಟ್ ಸಿಟಿ ಯೋಜನೆಯ ಹಣ ನೀಡುವ ಬಗ್ಗೆ ಆಯುಕ್ತರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಪ್ರೇಮಾನಂದ ಶೆಟ್ಟಿ ತಿರುಗೇಟು ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News