×
Ad

ಪತ್ರಕರ್ತರ ಹಂತಕರನ್ನು ಶಿಕ್ಷಿಸುವಲ್ಲಿ ಕಳಪೆ ಸಾಧನೆಯ ದೇಶಗಳ ಪಟ್ಟಿಯಲ್ಲಿ ಭಾರತ !

Update: 2018-10-31 19:35 IST

ಹೊಸದಿಲ್ಲಿ, ಅ.31: ಪತ್ರಕರ್ತರ ರಕ್ಷಣೆಗಾಗಿನ ಸಮಿತಿ(ಸಿಪೆಜೆ) ಬಿಡುಗಡೆ ಮಾಡಿರುವ ಜಾಗತಿಕ ನಿರ್ಭಯ ಸೂಚ್ಯಂಕದ ವರದಿಯ ಪ್ರಕಾರ , ಪತ್ರಕರ್ತರನ್ನು ಹತ್ಯೆ ಮಾಡಿರುವವರಿಗೆ ಶಿಕ್ಷೆ ನೀಡುವ ವಿಷಯದಲ್ಲಿ ಕಳಪೆ ಸಾಧನೆ ತೋರಿದ ದೇಶಗಳ ಪಟ್ಟಿಯಲ್ಲಿ ಭಾರತ 14ನೇ ಸ್ಥಾನ ಪಡೆದಿದೆ.

ಜಾಗತಿಕ ನಿರ್ಭಯ ಸೂಚ್ಯಂಕದಲ್ಲಿ 11ನೇ ವರ್ಷ ಭಾರತ ಸ್ಥಾನ ಪಡೆದಂತಾಗಿದೆ. ಭಾರತದಲ್ಲಿ ಪತ್ರಕರ್ತರ ಹತ್ಯೆಯ 18 ಪ್ರಕರಣಗಳ ನಿಗೂಢತೆಯನ್ನು ಇನ್ನೂ ಬೇಧಿಸಲಾಗಿಲ್ಲ. ದೇಶದಲ್ಲಿ ಪರಿಸ್ಥಿತಿ ಅತ್ಯಂತ ಹದಗೆಟ್ಟಿದೆ ಎಂದು ವರದಿ ತಿಳಿಸಿದೆ. 2017ರ ಸೆ.1ರಿಂದ 2018ರ ಆಗಸ್ಟ್ 31ರವರೆಗಿನ ಅವಧಿಯಲ್ಲಿ ಪ್ರತೀ ದೇಶದಲ್ಲಿ ಹತ್ಯೆಯಾದ ಪತ್ರಕರ್ತರ ಕುರಿತ ದತ್ತಾಂಶ ಮಾಹಿತಿಯನ್ನು ಆಧರಿಸಿ ವರದಿ ರೂಪಿಸಲಾಗಿದೆ. ಕನಿಷ್ಟ ಐದು ಬಗೆಹರಿಸಲಾಗದ ಹತ್ಯೆ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರವನ್ನು ಮಾತ್ರ ಪರಿಗಣಿಸಲಾಗಿದೆ.

ಅಲ್ಲದೆ ಯುದ್ಧದ ಸಮಯದಲ್ಲಿ ಮೃತಪಟ್ಟವರು ಅಥವಾ ಪ್ರತಿಭಟನೆ ಮುಂತಾದ ಅಪಾಯಕಾರಿ ಕಾರ್ಯನಿಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟ ಪತ್ರಕರ್ತರ ಪ್ರಕರಣವನ್ನು ಈ ಸೂಚ್ಯಾಂಕ ಒಳಗೊಂಡಿಲ್ಲ. ಈ ಪಟ್ಟಿಯಲ್ಲಿ ಸೊಮಾಲಿಯ ಅಗ್ರಸ್ಥಾನದಲ್ಲಿದ್ದರೆ ಬಳಿಕ ಕ್ರಮವಾಗಿ ಸಿರಿಯ, ಇರಾಕ್, ದಕ್ಷಿಣ ಸುಡಾನ್, ಫಿಲಿಪ್ಪೀನ್ಸ್, ಅಫ್ಘಾನಿಸ್ತಾನ, ಮೆಕ್ಸಿಕೊ, ಕೊಲಂಬಿಯ, ಪಾಕಿಸ್ತಾನ, ಬ್ರೆಝಿಲ್, ರಶ್ಯ, ಬಾಂಗ್ಲಾದೇಶ , ನೈಝೀರಿಯಾ ಹಾಗೂ ಭಾರತ ಸ್ಥಾನ ಪಡೆದಿದೆ. ಪತ್ರಕರ್ತರ ವಿರುದ್ಧ ನಡೆಯುತ್ತಿರುವ ಅಪರಾಧ ಪ್ರಕರಣಗಳ ನಿರ್ಭಯತೆಯನ್ನು ಕೊನೆಗೊಳಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ದಿನಾಚರಣೆಯನ್ನು ನವೆಂಬರ್ 2ರಂದು ಆಚರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ನಿರ್ಭಯ ಸೂಚ್ಯಂಕವನ್ನು ಪ್ರತೀ ವರ್ಷ ಬಿಡುಗಡೆಗೊಳಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News