ಅಮೆರಿಕ: ಭಾರತೀಯ ದಂಪತಿಗೆ ಮುಳುವಾದ ಸೆಲ್ಫಿ ಗೀಳು

Update: 2018-10-31 14:24 GMT

ನ್ಯೂಯಾರ್ಕ್, ಅ. 31: ಕ್ಯಾಲಿಫೋರ್ನಿಯದ ಯೋಸ್‌ಮೈಟ್ ನ್ಯಾಶನಲ್ ಪಾರ್ಕ್‌ನಲ್ಲಿ ಕಳೆದ ವಾರ 800 ಅಡಿ ಆಳದ ಕಣಿವೆಗೆ ಬಿದ್ದು ಮೃತಪಟ್ಟ ಭಾರತೀಯ ದಂಪತಿ, ದುರಂತ ಸಂಭವಿಸುವಾಗ ಸೆಲ್ಫಿ ತೆಗೆಯುತ್ತಿದ್ದರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

29 ವರ್ಷದ ವಿಷ್ಣು ವಿಶ್ವನಾಥ್ ಮತ್ತು 30 ವರ್ಷದ ಮೀನಾಕ್ಷಿ ಮೂರ್ತಿ ಮೃತಪಟ್ಟವರು. ಅವರನ್ನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ದಂಪತಿ ಎಂಬುದಾಗಿ ಸೋಮವಾರ ಗುರುತಿಸಲಾಗಿತ್ತು.

ದುರಂತ ಸಂಭವಿಸುವಾಗ ಅವರು ಸೆಲ್ಫಿ ತೆಗೆಯುತ್ತಿದ್ದಿರಬಹುದು ಎಂಬುದಾಗಿ ವಿಶ್ವನಾಥ್‌ರ ಸಹೋದರ ಜಿಷ್ಣು ವಿಶ್ವನಾಥ್ ಹೇಳಿದ್ದಾರೆ ಎಂದು ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ.

ಕ್ಯಾಲಿಫೋರ್ನಿಯ ಪಾರ್ಕ್‌ನಲ್ಲಿರುವ ಈ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳದಲ್ಲಿ ಜನರು ಆಸರೆಯಾಗಿ ಹಿಡಿದುಕೊಳ್ಳಲು ಯಾವುದೇ ಕಂಬಿಗಳಿಲ್ಲ.

ಡ್ರೈಪ್ಯಾಡ್ ಕ್ಯಾಮರವೊಂದು ಅನಾಥವಾಗಿ ಇದ್ದಿದ್ದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ, ಕಳೆದ ಗುರುವಾರ ಅವರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿತ್ತು.

ಬಹುಷಃ ಸೆಲ್ಫಿ ತೆಗೆಯುವುದಕ್ಕಾಗಿ ಮೀನಾಕ್ಷಿ ಮೂರ್ತಿ ಡ್ರೈಪ್ಯಾಡ್ ಸಿದ್ಧಪಡಿಸಿದ್ದರು ಎಂದು ಜಿಷ್ಣು ವಿಶ್ವನಾಥ್ ಹೇಳಿದ್ದಾರೆ.

ಗುರುವಾರ ಸ್ಥಳಕ್ಕೆ ಬಂದ ರೇಂಜರ್‌ಗಳು ಅಧಿಕ ಶಕ್ತಿಯ ಬೈನಾಕ್ಯುಲರ್‌ಗಳನ್ನು ಬಳಸಿ ಕಣಿವೆಯಲ್ಲಿ ಅವರನ್ನು ಪತ್ತೆಹಚ್ಚಿದರು ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಿ ಮೃತದೇಹಗಳನ್ನು ಹೊರದೆಗೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News