×
Ad

ಶಿಕ್ಷಕರು ವಿದ್ಯಾರ್ಥಿಗಳ ಕನಸಿಗೆ ದಾರಿದೀಪ : ಕೆ.ಕೆ.ನಾಸೀರ್

Update: 2018-10-31 20:15 IST

ಕೊಣಾಜೆ, ಅ. 31: ಪ್ರತಿಯೊಂದು ಶಾಲಾ ಶಿಕ್ಷಕರು ತಮ್ಮ ಜವಾಬ್ಧಾರಿಯೊಂದಿಗೆ ವಿದ್ಯಾರ್ಥಿಗಳ ಕನಸಿಗೆ ದಾರಿದೀಪವಾಗಬೇಕು. ಆಗ ಶಾಲೆಯು ಅಭಿವೃದ್ಧಿ ಕಾಣುವುದರೊಂದಿಗೆ ವಿದ್ಯಾರ್ಥಿಗಳು ಕೂಡಾ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಉದ್ಯಮಿ, ಶಿಕ್ಷಣ ಪ್ರೇಮಿ ಕೆ.ಕೆ.ನಾಸೀರ್ ಅವರು ಅಭಿಪ್ರಾಯಪಟ್ಟರು.

ಕೊಣಾಜೆಪದವು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿಯಾದ ಪ್ರೆಸ್ಸಿ ಕುವೆಲ್ಲೋ ಅವರಿಗೆ ಶಾಲಾ ಸಭಾಂಗಣದಲ್ಲಿ ಬುಧವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯ ಶಿಕ್ಷಕಿಯಾಗಿದ್ದ ಪ್ರೆಸ್ಸಿ ಕುವೆಲ್ಲೋ ಅವರು ಶಾಲೆಯ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮ ಪಟ್ಟಿದ್ದಾರೆ. ಅವರ ಪರಿಶ್ರಮದ ಫಲವಾಗಿ ಕೊಣಾಜೆ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ಗುರುತಿಸಿದೆ ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ, ಇಂದಿನ ಮಕ್ಕಳು ಮುಂದು ವರಿದಿದ್ದು ಓದುವ ಹವ್ಯಾಸ ಇಲ್ಲದಿರುವುದು ಶಿಕ್ಷಕರಿಗೆ ನಿಯಂತ್ರಣವೇ ಸಮಸ್ಯೆಯಾಗಿದ್ದು ನಿವೃತ್ತಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ಶಿಕ್ಷಕ ಜವಾಬ್ದಾರಿ ಮುಳ್ಳಿನ ಹಾಸಿಗೆ ಇದ್ದಂತೆ, ಆದರೆ ಅಧ್ಯಾಪಕರು ನಿರಾಶರಾಗದೆ ಆಶಾದಾಯಕರಾದಾಗ ಮುಂದಿನ ಜನಾಂಗ ಉತ್ತಮವಾಗಿ ರೂಪುಗೊಳಿಸಲು ಸಾಧ್ಯ ಎಂದು ಹೇಳಿದರು.

ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿ, ಲಯನ್ಸ್ ವತಿಯಿಂದ ಪುತ್ತೂರು ಶಾಲೆಗೆ ಮೀಸಲಿಟ್ಟಿದ್ದ ಹಣ ಶಿಕ್ಷಕಿಯ ಒತ್ತಾಯದ ಮೇರೆಗೆ ಕೊಣಾಜೆ ಶಾಲೆ ಅಭಿವೃದ್ಧಿಪಡಿಸಲಾಗಿದೆ. ಈ ಸಂದರ್ಭ ಯಾರೂ ಕಾಲೆಳೆಯದೆ ಸಹಕಾರ ನೀಡಿದ್ದಾರೆ ಎಂದರು.

ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಕೊಣಾಜೆ ಗ್ರಾಮ ಪಂ. ಮಾಜಿ ಅಧ್ಯಕ್ಷ ಅಚ್ಚುತ ಗಟ್ಟಿ, ಸದಸ್ಯರಾದ ಪ್ರಕಾಶ್, ರಾಜೀವಿ ಶೆಟ್ಟಿ, ಮುತ್ತು ಶೆಟ್ಟಿ, ಕ್ಲಾಸ್ ಟೂರ್ ಸಂಪನ್ಮೂಲ ವ್ಯಕ್ತಿ ಸುಗುಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ರಾವ್,  ಹಸನ್ ಕುಂಞಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಭಾರತಿ, ಮಂಗಳಾ ಫೌಂಡೇಶನ್ ಅಧ್ಯಕ್ಷ ಎ.ಕೆ.ರಹಿಮಾನ್ ಕೋಡಿಜಾಲ್, ಪ್ರಮೀತಾ ಮೆಂಡೋನ್ಸ, ಶರೀಫ್ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕಿ ಭಾರತಿ ಸ್ವಾಗತಿಸಿದರು. ಪೌಲಿನ್ ಅಭಿನಂದನಾ ಭಾಷಣ ಮಾಡಿದರು. ಸುಧಾ ಸನ್ಮಾನ ಪತ್ರ ವಾಚಿಸಿದರು. ಶುಭಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News