ಔಟಾಗದೆ 556 ರನ್ ಗಳಿಸಿದ ‘ಅದ್ಭುತ ಬಾಲಕ’!
ಹೊಸದಿಲ್ಲಿ, ಅ.31: ಭಾರತದ 1983ರ ವಿಶ್ವಕಪ್ ವಿಜೇತ ತಂಡದ ಹೀರೋ ಮೊಹಿಂದರ್ ಅಮರನಾಥ್‌ರಿಂದ ತರಬೇತಿ ಪಡೆದಿರುವ 14ರ ಹರೆಯದ ಬಾಲಕ ಪ್ರಿಯಾಂಶು ಮೊಲೀಯ ಜೂನಿಯರ್ ಕ್ರಿಕೆಟ್‌ನಲ್ಲಿ ಔಟಾಗದೆ 556 ರನ್ ಗಳಿಸಿ ಅಪೂರ್ವ ಸಾಧನೆ ಮಾಡಿದ್ದಾರೆ.
ವಡೋದರ ಕ್ರಿಕೆಟ್ ಅಕಾಡಮಿ(ವಿಸಿಎ)ಮೈದಾನದಲ್ಲಿ ನಡೆದ ಎರಡು ದಿನಗಳ ಡಿಕೆ ಗಾಯಕ್‌ವಾಡ್ ಅಂಡರ್-14 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮೊಹಿಂದರ್ ಲಾಲಾ ಅಮರನಾಥ್ ಕ್ರಿಕೆಟ್ ಅಕಾಡಮಿಯನ್ನು ಪ್ರತಿನಿಧಿಸಿದ್ದ ಪ್ರಿಯಾಂಶು, ಯೋಗಿ ಕ್ರಿಕೆಟ್ ಅಕಾಡಮಿ ವಿರುದ್ಧ 556 ರನ್ ಗಳಿಸಿದ್ದಾರೆ.
ಆಫ್ ಸ್ಪಿನ್ನರ್ ಕೂಡ ಆಗಿರುವ ಪ್ರಿಯಾಂಶು ನಾಲ್ಕು ವಿಕೆಟ್‌ಗಳನ್ನು ಉರುಳಿಸಿ ಯೋಗಿ ಅಕಾಡಮಿ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 52 ರನ್‌ಗೆ ಆಲೌಟ್ ಮಾಡಿದರು. ಮೊದಲ ದಿನವಾದ ಸೋಮವಾರ ಬ್ಯಾಟಿಂಗ್‌ನಲ್ಲಿ ಔಟಾಗದೆ 408 ರನ್ ಗಳಿಸಿದ್ದ ಪ್ರಿಯಾಂಶು ಎರಡನೇ ದಿನವಾದ ಮಂಗಳವಾರ ಮ್ಯಾರಥಾನ್ ಇನಿಂಗ್ಸ್‌ನ್ನು ಮುಂದುವರಿಸಿ ತನ್ನ ಮೊತ್ತಕ್ಕೆ ಇನ್ನೂ 148 ರನ್ ಸೇರಿಸಿದರು. 319 ಎಸೆತಗಳನ್ನು ಎದುರಿಸಿದ ಪ್ರಿಯಾಂಶು 98 ಬೌಂಡರಿ ಹಾಗೂ ಏಕೈಕ ಸಿಕ್ಸರ್ ಸಹಾಯದಿಂದ ಔಟಾಗದೆ 556 ರನ್ ಗಳಿಸಿದರು.
ಪ್ರಿಯಾಂಶು ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಅಮರನಾಥ್ ಕ್ರಿಕೆಟ್ ಅಕಾಡಮಿ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 826 ರನ್ ಗಳಿಸಿತು. ಆ ಬಳಿಕ ಯೋಗಿ ಅಕಾಡಮಿಯನ್ನು 2ನೇ ಇನಿಂಗ್ಸ್‌ನಲ್ಲಿ ಕೇವಲ 84 ರನ್‌ಗೆ ಕಟ್ಟಿಹಾಕಿದ ಅಮರನಾಥ್ ಕ್ರಿಕೆಟ್ ಅಕಾಡಮಿ 689 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಪ್ರಿಯಾಂಶು 2ನೇ ಇನಿಂಗ್ಸ್‌ನಲ್ಲೂ 2 ವಿಕೆಟ್ ಪಡೆದು ಮಿಂಚಿದರು.
‘‘ನಾನು ಕಳೆದ ವರ್ಷ ಇದೇ ಟೂರ್ನಿಯಲ್ಲಿ 254 ರನ್ ಗಳಿಸಿದ್ದೆ. ನನ್ನ ಇನಿಂಗ್ಸ್ ತೃಪ್ತಿ ತಂದಿದೆ. ನಾಲ್ಕೈದು ಬಾರಿ ಔಟಾಗುವ ಭೀತಿಯನ್ನು ಎದುರಿಸಿದ್ದೆ’’ ಎಂದು ಪ್ರಿಯಾಂಶು ಹೇಳಿದ್ದಾರೆ.