ಸರ್ದಾರ್ ಪಟೇಲ್ ಇಲ್ಲದಿರುತ್ತಿದ್ದರೆ ಚಾರ್ ಮಿನಾರ್ ವೀಕ್ಷಿಸಲು ವೀಸಾ ಬೇಕಾಗುತ್ತಿತ್ತು: ಮೋದಿ

Update: 2018-10-31 15:51 GMT

ಕೆವಡಿಯ,ಅ.31: ಸರ್ದಾರ್ ಪಟೇಲರು ದೇಶವನ್ನು ಒಂದುಗೂಡಿಸದೆ ಇರುತ್ತಿದ್ದರೆ ಗಿರ್‌ನ ಸಿಂಹಗಳನ್ನು ಮತ್ತು ಹೈದರಾಬಾದ್‌ನ ಚಾರ್ ಮಿನಾರ್ ವೀಕ್ಷಿಸಲು ವೀಸಾದ ಅಗತ್ಯ ಬೀಳುತ್ತಿತ್ತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಗುಜರಾತ್‌ನ ಕೆವಡಿಯದಲ್ಲಿ ಸರ್ದಾರ್ ವಲ್ಲಭ ಬಾಯ್ ಪಟೇಲರ ಸ್ಮರಣಾರ್ಥ ನಿರ್ಮಿಸಲಾಗಿರುವ ಏಕತೆಯ ಪ್ರತಿಕೆಯನ್ನು ಅನಾವರಣಗೊಳಿಸುವ ವೇಳೆ ಅವರು ಈ ಮಾತುಗಳನ್ನು ಆಡಿದ್ದಾರೆ. ಜಗತ್ತಿನಲ್ಲೇ ಅತ್ಯಂತ ಎತ್ತರ ಎಂದು ಹೇಳಲಾಗಿರುವ ಪಟೇಲರ ಪ್ರತಿಮೆಯು ಭಾರತವನ್ನು ಚೂರು ಮಾಡುವ ಪ್ರಯತ್ನವನ್ನು ತಡೆದ ವ್ಯಕ್ತಿಯ ಧೈರ್ಯವನ್ನು ನೆನಪಿಸುವ ಸಾಧನವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ರಾಜರ ಆಳ್ವಿಕೆಯಲ್ಲಿದ್ದ 550 ರಾಜ್ಯಗಳನ್ನು ಒಟ್ಟಾಗಿಸುವ ಮೂಲಕ ದೇಶವನ್ನು ಒಂದುಗೂಡಿಸುವಲ್ಲಿ ಪಟೇಲರು ನೀಡಿದ ಕಾಣಿಕೆಯನ್ನು ಈ ವೇಳೆ ಸ್ಮರಿಸಿದ ಪ್ರಧಾನಿ, ಸರ್ದಾರ್ ಪಟೇಲರು ಭಾರತ ಒಕ್ಕೂಟದ ಜೊತೆ ಸೇರಲು ಬಯಸದ ಜುನಗಡದ ನವಾಬ ಮತ್ತು ಹೈದರಾಬಾದ್‌ನ ನಿಝಾಮರ ವಿರುದ್ಧ ಸೇನೆಯನ್ನು ಬಳಸಿದ್ದರು. ಆಮೂಲಕ ಭಾರತವನ್ನು ಚೂರುಗಳಾಗಿ ಒಡೆಯುವ ಸಂಚನ್ನು ವಿಫಲಗೊಳಿಸಿದ್ದರು ಎಂದು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರಕಾರ ರಾಷ್ಟ್ರ ನಾಯಕರನ್ನು ಗೌರವಿಸುವ ಅನೇಕ ಸ್ಮಾರಕಗಳನ್ನು ನಿರ್ಮಿಸಿದೆ.

ಸರ್ದಾರ್ ಪಟೇಲರ ಆಕಾಶದೆತ್ತರದ ಪ್ರತಿಮೆ, ಅವರ ಹೆಸರಲ್ಲಿ ದಿಲ್ಲಿಯಲ್ಲಿ ವಸ್ತು ಸಂಗ್ರಹಾಲಯ, ಡಾ. ಅಂಬೇಡ್ಕರ್ ಅವರ ಪಂಚ ತೀರ್ಥ ಮತ್ತು ಗುಜರಾತ್‌ನ ಮಣ್ಣಿನ ಮಗ ಶ್ಯಾಮ್‌ಜಿ ಕೃಷ್ಣ ವರ್ಮಾರ ಸ್ಮಾರಕ ಇತ್ಯಾದಿಗಳು ಸರಕಾರ ನಿರ್ಮಿಸಿದ ಕೆಲವು ಸ್ಮಾರಕಗಳು ಎಂದು ಮೋದಿ ವಿವರಿಸಿದ್ದಾರೆ. ಸರ್ದಾರ್ ಪಟೇಲರ ಪ್ರತಿಮೆಯನ್ನು ಉದ್ಘಾಟಿಸಲಾಗಿದೆ. ಆದರೆ ಅವರು ನಿರ್ಮಿಸಲು ನೆರವಾದ ಪ್ರತಿಯೊಂದು ಸಂಸ್ಥೆಗಳನ್ನು ನಾಶಪಡಿಸಲಾಗಿರುವುದು ಕುಚೋದ್ಯವೇ ಸರಿ. ಭಾರತೀಯ ಸಂಸ್ಥೆಗಳ ವ್ಯವಸ್ಥಿತ ನಾಶಗೊಳಿಸುವಿಕೆ ದೇಶದ್ರೋಹಕ್ಕಿಂತ ಕಡಿಮೆಯೇನಲ್ಲ.

 ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ.

ನಾನು ಉತ್ತರ ಪ್ರದೇಶದಲ್ಲಿ ಡಾ. ಅಂಬೇಡ್ಕರ್ ಮತ್ತು ಇತರ ದಲಿತ ನಾಯಕರ ಸ್ಮಾರಕಗಳನ್ನು, ಪ್ರತಿಮೆಗಳನ್ನು ಸ್ಥಾಪಿಸಿದಾಗ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದ್ದೇನೆ ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿ ನನ್ನನ್ನು ಟೀಕಿಸಿತ್ತು. ಆದರೆ ಇದೀಗ ಅವರೇ ಗುಜರಾತ್‌ನಲ್ಲಿ 2,000 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಪಟೇಲರ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಮಾಯಾವತಿ, ಬಿಎಸ್‌ಪಿ ನಾಯಕಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News